ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವ ಪ್ರಯತ್ನ ಮುಂದುವರಿಸಬೇಕಿದೆ.
ಹುಬ್ಬಳ್ಳಿ: ದಿ ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ ಒಂದು ತಿಂಗಳಲ್ಲಿ ಹೊಸರೂಪದೊಂದಿಗೆ ಜನರ ಸೇವೆಗೆ ಲಭ್ಯವಾಗಲಿದ್ದು, ಎಲ್ಲರ ಸಹಕಾರ ಅತ್ಯಗತ್ಯ ಎಂದು ದಿ ಹುಬ್ಬಳ್ಳಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಹೇಳಿದರು.
ಅವರು ಭಾನುವಾರ ನಗರದ ಕೊಯಿನ್ ರಸ್ತೆಯಲ್ಲಿರುವ ದಿ ಹುಬ್ಬಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವ ಪ್ರಯತ್ನ ಮುಂದುವರಿಸಬೇಕಿದೆ. ಸೊಸೈಟಿಯು ಆಸ್ಪತ್ರೆ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸುವುದರ ಜತೆಗೆ, ಮೂಲ ಉದ್ದೇಶಗಳನ್ನು ಪಾಲಿಸಿಕೊಂಡು ಪಾರದರ್ಶಕತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವುದು, ಕಾರ್ಯಚಟುವಟಿಕೆಗಳನ್ನು ಬಲಪಡಿಸುವುದು ಹಾಗೂ ಸೊಸೈಟಿಯ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಸೊಸೈಟಿಯ ಕಾರ್ಯದರ್ಶಿ, ವಿಪ ಸದಸ್ಯ ಲಿಂಗರಾಜ ಪಾಟೀಲ ಅವರು ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪರಿಶೋಧಕ ಎಸ್.ಬಿ. ಶೆಟ್ಟಿ ಲೆಕ್ಕಪತ್ರಗಳನ್ನು ಮಂಡಿಸಿದರು. ಡಾ. ಶ್ರೀಧರ ದಂಡಪ್ಪನವರ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾದ ಲಿಂಗರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಹುಬ್ಬಳ್ಳಿ ಕೋ-ಆಪರೇಟಿವ್ ಸೊಸೈಟಿಯ ಹಿರಿಯ ಟ್ರಸ್ಟಿಗಳಾದ ಎ.ಎಂ. ಹಿಂಡಸಗೇರಿ, ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ ಶೆಟ್ಟರ್, ಆಡಳಿತ ಮಂಡಳಿ ನಿರ್ದೇಶಕರು, ಟ್ರಸ್ಟಿಗಳು ಉಪಸ್ಥಿತರಿದ್ದರು. ಖಜಾಂಚಿ ಮಹೇಂದ್ರ ಸಿಂಘಿ ಸ್ವಾಗತಿಸಿದರು. ಪುಂಡಲಿಕ ಅಪ್ಪನಬೈಲ್ ನಿರೂಪಿಸಿದರು. ಎಂ.ವಿ. ಕರಮರಿ ವಂದಿಸಿದರು.