ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ಆರಗ ಜ್ಞಾನೇಂದ್ರ

| Published : Aug 28 2024, 12:52 AM IST

ಸಾರಾಂಶ

ಶೃಂಗೇರಿಆರ್ಥಿಕ ಶೋಷಣೆಯಿಂದ ಮನುಷ್ಯನನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳು ಸಹಕಾರಿ. ಆರ್ಥಿಕ ಕ್ರೂಡಿಕರಣದಲ್ಲಿ ಮಹತ್ತರ ಪಾತ್ರವಹಿಸುವ ಜೊತೆಗೆ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ವ್ಯವಸ್ಥೆ ಬೆನ್ನೆಲುಬಾಗಿದೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಆರ್ಥಿಕ ಶೋಷಣೆಯಿಂದ ಮನುಷ್ಯನನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳು ಸಹಕಾರಿ. ಆರ್ಥಿಕ ಕ್ರೂಡಿಕರಣದಲ್ಲಿ ಮಹತ್ತರ ಪಾತ್ರವಹಿಸುವ ಜೊತೆಗೆ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ವ್ಯವಸ್ಥೆ ಬೆನ್ನೆಲುಬಾಗಿದೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಉಳುವಳ್ಳಿ ರೈತಭವನದಲ್ಲಿ ಶೃಂಗೇರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಸಾವಿರಾರು ಸಹಕಾರಿ ಸಂಸ್ಥೆಗಳಿದ್ದು, ಆರ್ಥಿಕ ವ್ಯವಹಾರಗಳ ಜೊತೆಗೆ ರೈತರ, ಕೃಷಿಯ ಅಭಿವೃದ್ಧಿಯಲ್ಲೂ ಮುಖ್ಯ ಪಾತ್ರವಹಿಸುತ್ತಾ ಬಂದಿವೆ.

ಸಹಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಬಹಳ ಕಷ್ಟದ ಕೆಲಸ. ಸಂಸ್ಥೆ ಅಳಿವು ಉಳಿವು ಸದಸ್ಯರ ಕೈಯಲ್ಲಿದೆ. ನಂಬಿಕಸ್ಥ ಆಡಳಿತ ಮಂಡಳಿ, ಸದಸ್ಯರ ಪ್ರಾಮಾಣಿಕ ಕಾರ್ಯವೈಖರಿ ಸಂಸ್ಥೆಯ ಅಭಿವೃದ್ಧಿಗೆ ಆದಾರ. ಪಕ್ಷ, ಪಂಗಡ ಮೀರಿ ಸಂಸ್ಥೆ ಬೆಳೆದಾಗ ಮಾತ್ರ ಯಶಸ್ಸು ಸಾಧ್ಯ. ಸಹಕಾರಿ ಸಂಸ್ಥೆಗಳು ದೇಶದ ರಕ್ಷಕನಾಗಿ ಕೆಲಸ ಮಾಡುತ್ತಿದೆ. ಶೃಂಗೇರಿಯಲ್ಲಿ ಟಿಎಪಿಸಿಎಂಸಿ ರೈತಭವನ ಸ್ಥಾಪಿಸಿ ಜನರ ಅಗತ್ಯತೆಗೆ ತಕ್ಕಂತೆ ಸೇವೆ ನೀಡುತ್ತಿದೆ. ಈ ಸಂಸ್ಥೆ ಸ್ಥಾಪನೆಯಾಗಿ 75 ವರ್ಷ ಪೋರೈಸಿದೆ. ಇದರ ಲಾಭ ಜನರಿಗೆ ಇನ್ನಷ್ಟು ಸಿಗುವಂತಾಗಬೇಕು.

ಶೃಂಗೇರಿ ತಾಲೂಕಿನಲ್ಲಿ ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿರೋಗ ಇತ್ಯಾದಿ ಸಮಸ್ಯೆಗಳಿಂದ ರೈತರು ಸಂಕಷ್ಟ ದಲ್ಲಿದ್ದಾರೆ. ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ. ಈ ನಿಟ್ಟಿನಲ್ಲಿ ಸಂಶೋಧನೆಗೆ ವಿಜ್ಞಾನಿಗಳ ತಂಡ ನೇಮಿಸಲಾಗಿದೆ ಎಂದರು.

ರೈತಭವನ ನಿರ್ಮಾಣದ ದಾನಿ ರಾಘವೇಂದ್ರ ನಾಯಕ ಮಾತನಾಡಿ ಮಣ್ಣಿನ ಮತ್ತು ತಾಯಿ ಋಣ ತೀರಿಸುವುದು ಪುಣ್ಯದ ಕೆಲಸ. ಸಮಾಜ ನನಗೇನು ನೀಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ನೀಡಬಲ್ಲೆ ಎಂಬುದು ಮುಖ್ಯ. ನಮ್ಮ ಬದುಕಿನಲ್ಲಿ ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದಾಗ ಬದುಕು ಸಾರ್ಥಕವಾಗುತ್ತದೆ. ಸಹಕಾರಿ ಸಂಸ್ಥೆ ಗಾಂಧಿಜೀ ಯವರ ಕಲ್ಪನೆಯಾಗಿತ್ತು.

ರೈತಭವನ ಸಾಕಷ್ಟು ಉಪಯುಕ್ತ. ಇಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಸಾಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಕಾರ್ಯಕ್ರಮ, ಚಟುವಟಿಕೆಗಳು ನಡೆದರೆ ಇನ್ನಷ್ಟು ಉಪಯುಕ್ತವಾಗಲಿದೆ. ವೈಚಾರಿ ಪ್ರಜ್ಞೆ ಮೂಡಿಸಲು, ಪ್ರತಿಭೆಗಳು ಅರಳಲು ವೇದಿಕೆ ಯಾಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಯುವಜನತೆ ಆಸಕ್ತಿ ವಹಿಸಬೇಕಿದೆ ಎಂದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಸ್ಥೆಗಳು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು ಸಮಾಜಕ್ಕೆ ಮಾದರಿಯಾಗಿದೆ. ಶೃಂಗೇರಿಯಲ್ಲಿ ಸಂಸ್ಥೆ ಪ್ರಗತಿ ಪಥದಲ್ಲಿದೆ.ಇಲ್ಲಿ ಎಲ್ಲಾಜನರ ಅವಶ್ಯಕತೆಗೆ ಅನುಗುಣವಾಗಿ ಭವನ ನಿರ್ಮಾಣ ಮಾಡಲಾಗಿದೆ. ಇದು ಉತ್ತಮ ಸಾಧನೆ ಎಂದರು. ಸಂಸ್ಥೆ ಅಧ್ಯಕ್ಷ ಎಚ್.ಕೆ. ನವೀನ್ ಕಿಗ್ಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಾನಿಗಳಾದ ರಾಘವೇಂದ್ರ ನಾಯಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ಅಪರ ನಿಬಂಧಕ ರವೀಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಸಿ.ಶಂಕರಪ್ಪ, ಎಸ್.ಎನ್.ರಾಮಸ್ವಾಮಿ,ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ದಿನೇಶ್ ಹೊಸೂರು ,ಮ್ಯಾಮ್ ಕೋಸ್ ನಿರ್ದೇಶಕ ಟಿ.ಕೆ.ಪರಾಶರ, ಅಂಬಳೂರು ಸುರೇಶ್ ಚಂದ್ರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ನಯನ, ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ ಮತ್ತಿತರರು ಉಹಸ್ಥಿತರಿದ್ದರು.

27 ಶ್ರೀ ಚಿತ್ರ 1-

ಶೃಂಗೇರಿ ಉಳುವಳ್ಳಿ ರೈತಭವನದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್ ಉದ್ಘಾಟಿಸಿದರು.