ಕೋಚಿಂಗ್‌: ಸುತ್ತೋಲೆಗಳಿಗೂ ಸೊಪ್ಪು ಹಾಕದ ಅಧಿಕಾರಿಗಳು

| Published : Jul 04 2025, 11:48 PM IST

ಸಾರಾಂಶ

ಬಿಇಒ ಅವರ ಮೇಲೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ವಾರ ಕಳೆದ್ರೂ ಕೋಚಿಂಗ್‌ ಮುಚ್ಚೋದ ಬಿಡಿ, ಇಲ್ಲಿನ ಶಿಕ್ಷಣ ಅಧಿಕಾರಿಗಳು ಅದರತ್ತ ಮುಖಮಾಡುವ ಗೋಜಿಗೂ ಹೋಗಿಲ್ಲ ಅನ್ನೋದು ವಿಪರ್ಯಾಸದ ಸಂಗತಿ.

ಅನೀಲಕುಮಾರ ದೇಶಮುಖ

ಕನ್ನಡಪ್ರಭ ವಾರ್ತೆ, ಔರಾದ್

ಪಟ್ಟಣದಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿರುವ ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚಿಸುವಲ್ಲಿ ವಿಫಲರಾದ ಶಿಕ್ಷಣಾಧಿಕಾರಿಗಳಿಗೆ ಡಿಡಿಪಿಐ ಅವರು ಹೊರಡಿಸಿದ ಕಾರಣ ಕೇಳಿ ನೋಟಿಸ್‌ ನಿಜಕ್ಕೂ ನಿಷ್ಪ್ರಯೋಜಕವಾಗಿದೆ. ಇಂಥ ಸಾಲು ಸಾಲು ನೋಟಿಸ್‌ಗಳಿಗೆ ‘ಕ್ಯಾರೇ’ ಎನ್ನದೆ ಅಧಿಕಾರಿಗಳ ವರ್ತನೆಯಿಂದ ಶಿಕ್ಷಣ ಇಲಾಖೆ ದಾರಿ ತಪ್ಪಿದ ಮಕ್ಕಳಂತಾಗಿದೆ.ಜೂ.24ರಂದು ಡಿಡಿಪಿಐ ಸಲೀಂ ಪಾಶಾ ಅವರು 13 ಉಲ್ಲೇಖಗಳನ್ನೊಳಗೊಂಡ ಕಾರಣ ಕೇಳಿ ನೋಟಿಸ್‌ ಜಿಲ್ಲೆಯ ಎಲ್ಲಾ ಬಿಇಒಗಳಿಗೆ ಜಾರಿ ಮಾಡಿದ್ದರು. ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳು, ವಸತಿ ಮನೆ ಪಾಠಗಳನ್ನು ಅಧಿಕಾರಿಗಳ ತಂಡ ನೇಮಕ ಮಾಡಿ ದಾಳಿ ನಡೆಸಿ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿ ಮುಚ್ಚಿಸಿ ವರದಿ ನೀಡುವಲ್ಲಿ ವಿಫಲರಾಗಿದ್ದಿರಿ ಹೀಗಾಗಿ ಮೂರು ದಿನದಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಲಾಗಿದ್ದು ಇಲ್ಲದಿದ್ದಲ್ಲಿ ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಿಇಒ ಅವರ ಮೇಲೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ವಾರ ಕಳೆದ್ರೂ ಕೋಚಿಂಗ್‌ ಮುಚ್ಚೋದ ಬಿಡಿ, ಇಲ್ಲಿನ ಶಿಕ್ಷಣ ಅಧಿಕಾರಿಗಳು ಅದರತ್ತ ಮುಖಮಾಡುವ ಗೋಜಿಗೂ ಹೋಗಿಲ್ಲ ಅನ್ನೋದು ವಿಪರ್ಯಾಸದ ಸಂಗತಿ.ಈ ಎಲ್ಲಾ ಬೆಳವಣಿಗೆಗಳಲ್ಲಿ ಜೂ.30ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ ಅವರು 10 ಕೋಚಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿ ಮೂರು ದಿನಗಳ ಗಡವು ನೀಡಿ, ನೋಟಿಸ್‌ ಕೊಟ್ಟು ಬಂದಿದ್ದಾರೆ. ಅನಧಿಕೃತ ಕೋಚಿಂಗ್‌ ಸೆಂಟರ್‌ಗಳು ಮುಚ್ಚುವಂತೆ ಸರ್ಕಾರದ ಖಡಕ್‌ ಆದೇಶ ಇರುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್‌, ನೋಟಿಸ್‌ ಎಂದೆನ್ನತ್ತಲೇ ಇರುವುದರ ಹಿಂದಿನ ಮರ್ಮ ಅರ್ಥವಾಗದಂತಿದೆ.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತ್ರಿಸದಸ್ಯ ತಂಡ ಕೋಚಿಂಗ್‌ ಸೆಂಟರ್‌ ಮೇಲೆ ದಾಳಿ ಮಾಡಿ ಕನಿಷ್ಠ ಸೌಲಭ್ಯಗಳಿಲ್ಲದೆ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅಧಿಕಾರಿಗಳ ಮೇಲೆ ಕೆಂಡಾಮಂಡಲರಾಗಿದ್ದರು. ಆಯೋಗ ಕೋಚಿಂಗ್‌ ಕೇಂದ್ರಗಳನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿದಾಗ್ಯೂ ಸ್ಥಳೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತೇ ಜಾಣ ಮೌನ ವಹಿಸಿರುವುದು ದುರಂತದ ಸಂಗತಿ.

ಕೋಚಿಂಗ್‌ ಕೇಂದ್ರಗಳನ್ನು ನಾಮ್‌ ಕೇ ವಾಸ್ತೆ ಮುಚ್ಚುವ ನಾಟಕ ಮಾಡಿದರೆ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು. ಕಳೆದ ವರ್ಷ ಇದೇ ರೀತಿ ಕೋಚಿಂಗ್‌ ಕೇಂದ್ರಗಳ ಮೇಲೆ ದಾಳಿ ಮಾಡಿ ನೋಟಿಸ್‌ ಹೆಸರಿನ ನಾಟಕ ಮಾಡಿ ನಾಲ್ಕು ದಿನ ಬಂದ್‌ ಮಾಡಿ ಆಮೇಲೆ ಎಂದಿನಂತೆ ಚಲಾಯಿಸಲು ಬಿಟ್ಟ ಅಧಿಕಾರಿಗಳ ವರ್ತನೆ ನೋಡಿದ್ದೇವೆ ಆದರೆ ಈಗ ಹೀಗೆ ಆಗಲು ಬಿಡುವುದಿಲ್ಲ ಎಂದು ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನೀಲ ದೇವಕತ್ತೆ ಹೇಳಿದರು.

ಇನ್ನು, ಔರಾದ್‌ ಪ್ರಭಾರಿ ಬಿಇಒ ಪ್ರಕಾಶ ರಾಠೋಡ ಅವರು ಮಾತನಾಡಿ, ಕೋಚಿಂಗ್‌ ಕೇಂದ್ರಗಳಿಗೆ ನೋಟಿಸ್‌ ನೀಡಿದ್ದೇವೆ. ನೋಟಿಸ್‌ 5 ಜುಲೈಗೆ ಅವಧಿ ಮುಗಿಯುತ್ತೆ. ಆ ಮೇಲೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತಿದ್ದಾರೆ.