ಫ್ರೀಡಂ ಪಾರ್ಕ್‌ನಲ್ಲಿ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಎಸ್ಐಆರ್ ರದ್ದತಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಎಸ್ಐಆರ್ ವಿರೋಧಿ ಒಕ್ಕೂಟ, ಜಿರಳೆ ಜನತಾ ಪಕ್ಷ ಹಾಗೂ ವಿವಿಧ ನಾಗರಿಕ ನಾಗರಿಕ ಹಕ್ಕುಗಳ ಸಂಘಟನೆಗಳಿಂದ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಆಯಿಷಾ ಘೋಷ್, ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ, ಬಹುಭಾಷಾ ನಟ ಪ್ರಕಾಶ್ ರಾಜ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹಿರಿಯ ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು, ಲೇಖಕರು, ಹೋರಾಟಗಾರರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಎಸ್‌ಐಆರ್ ಪ್ರಕ್ರಿಯೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡರು. ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ವಿರೋಧಿ ಹೋರಾಟ ಸಂಘಟಿಸಿ ಯಶಸ್ವಿಯಾಗಿದ್ದು ಅಭಿಜಿತ್ ದೀಪ್ಕೆ ಬೆಂಗಳೂರಿನಲ್ಲಿ ನಡೆಸಿದ ಮೊದಲ ಪ್ರತಿಭಟನೆ ಇದಾಗಿತ್ತು. ಧ್ರುವ್ ರಾಠಿ ಅವರು ಜಿರಳೆ ಹೋರಾಟದಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು.
ಎಸ್‌ಐಆರ್ ಪ್ರಕ್ರಿಯೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಬಡವರು, ಮುಸ್ಲಿಮರು, ಆದಿವಾಸಿಗಳು, ಅಲ್ಪಸಂಖ್ಯಾತರ ಮತಗಳನ್ನು ರದ್ದು ಮಾಡಲಾಗುತ್ತಿದೆ. ಈ ದೇಶದ ಪ್ರಜೆಗಳ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕೂಡಲೇ ಈ ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಆಗ್ರಹಿಸಿದರು.ವಿಡಿಯೋ ತುಣಕು ಪ್ರದರ್ಶನ:
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಸರು ಡಿಲೀಟ್ ಆದ ಸಂತ್ರಸ್ತರ ಗೋಳಾಟದ ವಿಡಿಯೋ ತುಣುಕುಗಳನ್ನು ಪ್ರತಿಭಟನೆ ವೇಳೆ ಪ್ರದರ್ಶಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಸ್ಐಆರ್ ಸಂತ್ರಸ್ತರನ್ನು ವೇದಿಕೆ ಬಳಿ ಕರೆಸಿ ಜನತಾ ನ್ಯಾಯಾಲಯದ ಮಾದರಿಯಲ್ಲಿ ಅಹವಾಲು ಆಲಿಸಲಾಯಿತು. ಈ ವೇಳೆ ಹಿರಿಯ ಸಾಹಿತಿ ದೇವನೂರು ಮಹಾದೇವ, ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್, ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಸೇರಿದಂತೆ ಹಲವು ಹೋರಾಟಗಾರರು ಈ ಎಸ್‌ಐಆರ್ ಸಂತ್ರಸ್ತರಿಗೆ ಬೆಂಬಲ ಸೂಚಿಸಿದರು. ಈ ಎಸ್ಐಆರ್ ಪ್ರಕ್ರಿಯೆ ವಿರೋಧ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ವೇದಿಕೆಗೆ ಆಗಮಿಸಿದ ಬಳಿಕ ಪ್ರತಿಭಟನಾಕಾರರಲ್ಲಿ ಉತ್ಸಾಹ ಇಮ್ಮಡಿಯಾಯಿತು. ‘ಎರರ್ 404 ನೇಮ್ ನಾಟ್ ಫೌಂಡ್’, ‘ವೋಟ್ ಚೋರ್, ವೋಟ್ ಚೋರ್, ನರೇಂದ್ರ ಮೋದಿ ವೋಟ್ ಚೋರ್’, ಜ್ಞಾನೇಶ್ ಕುಮಾರ್ ಕುರಿತು ‘ಇಟ್ಸ್ ಡನ್ ಬ್ರೋ, ರಿಸೈನ್ ಸರ್’ ಮೊದಲಾದ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಚಿತ್ರಗಳಿರುವ ಪೋಸ್ಟರ್‌ಗಳ ಜೊತೆಗೆ ‘ಪ್ರಜಾಪ್ರಭುತ್ವದ ಬೃಹತ್ ಕಳ್ಳತನ’ ಬರಹಗಳನ್ನು ಪ್ರದರ್ಶಿಸಲಾಯಿತು. ‘ಸರ್ವಾಧಿಕಾರ ಸಹಿಸುವುದಿಲ್ಲ’, ‘ಮತ ಕಳ್ಳತನ’, ‘ಜ್ಞಾನೇಶ್ ಕುಮಾರ್ ಕುರ್ಚಿ ಬಿಟ್ಟು ತೊಲಗಿ’ ಮೊದಲಾದ ಘೋಷಣೆಗಳನ್ನು ಮೊಳಗಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್:ಎಸ್ಐಆರ್ ಪ್ರಕ್ರಿಯೆ ವಿರೋಧ ಹೋರಾಟದ ಹಿನ್ನೆಲೆಯಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಬೃಹತ್ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಉದ್ಯಾನದ ಬಳಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಈ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.