ಕೋಕೋ ಕಿಲೋಗೆ ₹130: ಸಾರ್ವಕಾಲಿಕ ದಾಖಲೆ!

| Published : Feb 25 2024, 01:45 AM IST

ಸಾರಾಂಶ

ಸಾಧಾರಣವಾಗಿ ಕರಾವಳಿ, ಮಲೆನಾಡಿನ ಅಡಕೆ ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯಲಾಗುವ ಕೋಕೋ ದರ ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆ ಕಾಣುತ್ತಿದ್ದು, ಶನಿವಾರ ಸಾರ್ವಕಾಲಿಕ ದಾಖಲೆಯ ದರ ತಲುಪಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಧಾರಣವಾಗಿ ಕರಾವಳಿ, ಮಲೆನಾಡಿನ ಅಡಕೆ ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯಲಾಗುವ ಕೋಕೋ ದರ ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆ ಕಾಣುತ್ತಿದ್ದು, ಶನಿವಾರ ಸಾರ್ವಕಾಲಿಕ ದಾಖಲೆಯ ದರ ತಲುಪಿದೆ. ಇದರೊಂದಿಗೆ ಅಡಕೆ ಬೆಲೆ ಇಳಿಮುಖದಿಂದ ಆತಂಕಕ್ಕೆ ಒಳಗಾಗಿರುವ ಅಡಕೆ ಬೆಳೆಗಾರರು ತೋಟಗಳಲ್ಲಿ ಉಪ ಬೆಳೆಯಾಗಿ ಕೋಕೋ ಬೆಳೆಯತ್ತ ಮುಖ ಮಾಡುತ್ತಿದ್ದಾರೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಅಡಕೆ ತೋಟಗಳಲ್ಲೇ ಕೋಕೋವನ್ನು ಉಪ ಬೆಳೆಯಾಗಿ ಬೆಳೆಯುತ್ತಾರೆ. ಒಂದು ದಶಕದ ಹಿಂದೆ ಅಡಕೆ ಧಾರಣೆ ಏರುಗತಿಯಲ್ಲಿದ್ದಾಗ ಕೋಕೋ ಗಿಡವನ್ನು ಕಡಿದು ಅಡಕೆ ಬೆಳೆಗೆ ಪ್ರಾಮುಖ್ಯ ನೀಡಿದವರೇ ಜಾಸ್ತಿ. ಈಗ ಅದು ತಿರುಗು ಮುರುಗಾಗುತ್ತಿದ್ದು, ಅಡಕೆ ಜತೆ ಕೋಕೋ ಕೂಡ ಉಪ ಬೆಳೆಯಾಗಿ ಇರಲಿ ಎಂಬ ಭಾವನೆಗೆ ರೈತರು ಬಂದಿದ್ದಾರೆ.

ಪ್ರಸ್ತುತ ಹಸಿ ಕೋಕೋ ಕೇಜಿಗೆ 130 ರು.ವರೆಗೆ ಧಾರಣೆ ತಲುಪಿದ್ದು, ಕೋಕೋ ಬೆಳೆಯ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ಎರಡು ತಿಂಗಳಿಂದ ಕೋಕೋ ಧಾರಣೆಯಲ್ಲಿ ಏರುಗತಿ ಕಾಣಿಸತೊಡಗಿದೆ. ಕಿಲೋಗೆ ಒಂದು ವಾರದ ಹಿಂದೆ 100 ರು.ತಲುಪಿದ್ದು, ಶುಕ್ರವಾರ 125 ರು, ಶನಿವಾರ 130 ರು. ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕಿಲೋಗೆ 50 ರುಪಾಯಿ ದರ ಇದ್ದರೆ, 6 ತಿಂಗಳ ಹಿಂದೆ 60 ರುಪಾಯಿಯಷ್ಟೇ ದರವಿತ್ತು. ಕೋಕೋ ಬೀಜದ ಕೊರತೆ ಇದಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ. ಮುಖ್ಯವಾಗಿ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕೋಕೋ ಖರೀದಿಸುತ್ತಿದ್ದು, ಮಾಸಿಕ 500ರಿಂದ 550 ಟನ್‌ ಕೋಕೋ ಬೀನ್ಸ್‌ ಕೊರತೆ ಎದುರಿಸುತ್ತಿದೆ. ಬೇಡಿಕೆಯಷ್ಟು ಕರ್ನಾಟಕದಲ್ಲಿ ಕೋಕೋ ಉತ್ಪಾದನೆ ಇಲ್ಲದ ಕಾರಣ ನೆರೆಯ ಕೇರಳ, ಆಂಧ್ರ ಹಾಗೂ ತಮಿಳ್ನಾಡುಗಳ ಮೊರೆ ಹೋಗಬೇಕಾಗಿದೆ.

ಪುತ್ತೂರಿನಲ್ಲಿರುವ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಚಾಕಲೇಟ್ ಉತ್ಪನ್ನಗಳ ತಯಾರಿಕೆಗೆ ಕೋಕೋಗೆ ಸಾಕಷ್ಟು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಕೂಡ ಕೋಕೋ ಗಿಡಗಳನ್ನು ತನ್ನ ಶಾಖೆಗಳ ಮೂಲಕ ವಿತರಿಸಲು ಕ್ರಮ ಕೈಗೊಂಡಿದೆ. ಮಳೆಗಾಲದಲ್ಲೂ ಕ್ಯಾಂಪ್ಕೋ ಕೋಕೋ ಬೀಜ ಖರೀದಿಸುವ ಮೂಲಕ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿದೆ. ಅಡಕೆ ಖರೀದಿ ಆರಂಭಿಸಿದ್ದ ಕ್ಯಾಂಪ್ಕೋ ನಂತರ ಕೋಕೋ ಖರೀದಿಗೆ ಮುಂದಾಗಿರುವುದರ ಹಿಂದೆಯೂ ರೋಚಕ ಸಂಗತಿ ಇದೆ. ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿ ಪ್ರಾರಂಭವಾದಾಗ ಬಹುರಾಷ್ಟ್ರೀಯ ಕಂಪನಿಯೊಂದು ಕೋಕೋ ಬೆಳೆಯುವಂತೆ ಕೃಷಿಕರನ್ನು ಪ್ರೋತ್ಸಾಹಿಸಿತ್ತು. ಆದರೆ ಫಸಲು ಕೈಗೆ ಬಂದಾಗ ಖರೀದಿಸಲು ಒಲ್ಲೆ ಎಂದಿತ್ತು. ಆಗ ಕ್ಯಾಂಪ್ಕೋ ಸಣ್ಣ ಪ್ರಮಾಣದಲ್ಲಿ ಕೋಕೋ ಖರೀದಿಸುತ್ತಿತ್ತು. ಬಹುರಾಷ್ಟ್ರೀಯ ಕಂಪನಿಯ ಅಸಡ್ಡೆ ನೀತಿಯಿಂದಾಗಿ ಬೆಳೆಗಾರರ ಹಿತ ಕಾಯುವ ಸಲುವಾಗಿ ನೇರವಾಗಿ ಕೋಕೋ ಖರೀದಿಗೆ ಕ್ಯಾಂಪ್ಕೋ ಮುಂದಾಯಿತು. ಬಳಿಕ ವಿದೇಶದಿಂದ ಯಂತ್ರೋಪಕರಣ ತರಿಸಿ ಕ್ಯಾಂಪ್ಕೋ ಬ್ರಾಂಡ್‌ ಚಾಕಲೇಟ್‌ ಉತ್ಪಾದನೆಗೆ ಇಳಿದಿರುವುದು ಈಗ ಇತಿಹಾಸ.