ತೆಂಗಿನಕಾಯಿ ಬೆಲೆ ಗಗನಕ್ಕೆ : ಕೆಜಿಗೆ ₹ 90

| N/A | Published : Apr 28 2025, 12:48 AM IST / Updated: Apr 28 2025, 01:16 PM IST

ಸಾರಾಂಶ

ತೆಂಗು ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಟ್ಟಿದೆ. 

 ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕೆಜಿ ತೆಂಗಿನಕಾಯಿ ಬೆಲೆ 85 ರಿಂದ 90 ರುಪಾಯಿ ತಲುಪಿದ್ದು, ಶತಕದ ಗಡಿಯತ್ತ ದಾಪುಗಾಲಿಡುತ್ತಿದೆ. ಒಂದು ಸಣ್ಣ ತೆಂಗಿನಕಾಯಿ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆ ಅಲ್ಲದಿದ್ದರೂ, ಅಲ್ಲಲ್ಲಿ ತೆಂಗು ಬೆಳೆಸಲಾಗಿದೆ.

ತೆಂಗು ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಟ್ಟಿದೆ.ಆಹಾರ ಪದಾರ್ಥಗಳಿಗೆ ತೆಂಗಿನಕಾಯಿ ಯತೇಚ್ಛವಾಗಿ ಬಳಸುತ್ತಿದ್ದವರು, ಈಗ ಅನಿವಾರ್ಯವಾಗಿ ಬೇಕಾದ ಪದಾರ್ಥಗಳಿಗೆ ಮಾತ್ರ ಬೆಳೆಸುವಂತಾಗಿದೆ. ಹೋಟೆಲ್‌ ಉದ್ಯಮದವರ ಪಾಡು ಹೇಳತೀರದಾಗಿದೆ. ದೇವರ ಪೂಜೆಗೆ ತೆಂಗಿನಕಾಯಿಗಿಂತ ಹಣ್ಣುಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಎಳನೀರಿಗೆ ಹೆಚ್ಚಿದ ಬೇಡಿಕೆ

ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದಿರುವುದು ತೆಂಗು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ಕೆಲ ಭಾಗಗಳಲ್ಲಿ ನೀರಿನ ಕೊರತೆಯಿಂದ ತೆಂಗಿನ ಮರಗಳು ಒಣಗಿ ಹೋಗಿದ್ದರೆ, ಮತ್ತೆ ಕೆಲವೆಡೆ ರೋಗಕ್ಕೆ ತುತ್ತಾಗಿ ನಾಶವಾಗಿವೆ. ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಎಳನೀರಿಗೆ ಬೇಡಿಕೆ ಸಾಕಷ್ಟಿದೆ. ಹಾಗಾಗಿ, ರೈತರು ಎಳನೀರು ಹಂತದಲ್ಲೇ ಮಾರಾಟ ಮಾಡುತ್ತಿರುವುದರಿಂದ ತೆಂಗಿನಕಾಯಿ ಕೊರತೆ ಉಂಟಾಗಿ ಬೇಡಿಕೆ ಹೆಚ್ಚಾಗಿದೆ.

ಕಳೆದ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ತೆಂಗಿಗೆ ಉತ್ತಮ ಬೆಲೆ ಸಿಗದೆ ಬೇಸರಗೊಂಡು ತೆಂಗು ಕೃಷಿಯಿಂದಲೇ ಹಲವು ರೈತರು ದೂರ ಸರಿದಿದ್ದರು. ಈ ವರ್ಷ ಬಂಪರ್‌ ಬೆಲೆ ಇದೆ. ಆದರೆ ಬೆಳೆ ಇಲ್ಲದಂತಾಗಿದೆ. ತೆಂಗಿನಕಾಯಿ ವ್ಯಾಪಾರಿಗಳು ತುಮಕೂರು, ತಿಪಟೂರು, ಅರಸೀಕೆರೆ, ತಮಿಳು ನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ಕಡೆಗಳಿಂದ ತೆಂಗಿನಕಾಯಿಯನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ.

ಚೆಂಗಿನ ಚಿಪ್ಪಿಗೂ ಬೇಡಿಕೆ

ತೆಂಗಿನಕಾಯಿ ಮತ್ತು ಎಳನೀರು ಬೆಲೆ ಏರಿಕೆ ನಡುವೆ ತೆಂಗಿನಕಾಯಿ ಚಿಪ್ಪಿಗೂ ಸಹ ಬೇಡಿಕೆ ಬಂದಿದ್ದು, ಒಂದು ಟನ್‌ 28,000 ರೂ.ಗೆ ತಲುಪಿದೆ.ಈ ಹಿಂದಿನ ವರ್ಷಗಳಲ್ಲಿ ಒಂದು ಟನ್‌ 7ರಿಂದ 8 ಸಾವಿರ ರೂ.ಗೆ ಸಿಗುತ್ತಿತ್ತು. ಎರಡು ವರ್ಷಗಳ ಹಿಂದೆ 17 ಸಾವಿರ ರೂಪಾಯಿ ಇತ್ತು. ಆದರೆ ಈ ಬಾರಿ ಬರೋಬ್ಬರಿ 28 ಸಾವಿರ ರೂ.ಗೆ ತಲುಪಿದೆ. ತೆಂಗಿನಕಾಯಿ ಬೆಲೆ ಹೆಚ್ಚಾದರೂ ಸಹ ಬಳಸುವುದು ಅನಿವಾರ್ಯ. ಬೆಲೆ ಎಷ್ಟೇ ಆದರೂ ಸಹ ತೆಂಗಿನಕಾಯಿ ತಂದು ಅಡುಗೆ ಮಾಡಬೇಕಿದೆ. ತೆಂಗಿನಕಾಯಿ ಭಾರಿ ದುಬಾರಿ ಆಗಿರುವುದು ಹೋಟೆಲ್‌ ಮತ್ತು ಬೇಕರಿ ಮಾಲೀಕರಿಗೂ ಕಷ್ಟ ಎದುರಾಗಿದೆ. ರುಚಿಗೆ ಕಾಯಿ ಬಳಸಬೇಕು, ಕಾಯಿ ಬಳಸಿದೆ ಆಹಾರ ಪದಾರ್ಥಗಳ ದರ ಹೆಚ್ಚಿಸಬೇಕು ಎಂದು ಹೋಟೆಲ್‌ ಮಾಲೀಕರ ಅಭಿಪ್ರಾಯ