ಹೂವಿನ ಕೃಷಿ ಮಾಡಿ ಕೈ ತುಂಬಾ ಹಣ ಗಳಿಸಿದ ರೈತ

| N/A | Published : Apr 27 2025, 01:53 AM IST / Updated: Apr 27 2025, 12:26 PM IST

ಸಾರಾಂಶ

ತಂಪಾದ ವಾತಾವರಣದಲ್ಲಿ ಹೂವು ಬೆಳೆಯುವುದನ್ನು ನಾವು ಕೇಳಿದ್ದೇವೆ. ಅದಾಗ್ಯೂ ಬೆಳೆದಂತಹ ಹೂವು 24 ಗಂಟೆಗಳಲ್ಲಿ ಕಟಾವಾಗಿ ಮಾರಾಟವಾದರಷ್ಟೇ ರೈತನಿಗೆ ಕೈಗೆ ಒಂದಿಷ್ಟು ಹಣ

ಶಿವಾನಂದ ಮಲ್ಲನಗೌಡ್ರ 

ಬ್ಯಾಡಗಿ : ಕೃಷಿ ಮೇಲಿನ ವೆಚ್ಚ ಹಾಗೂ ಅದಕ್ಕಾಗಿ ಮಾಡಿದ ಸಾಲ ತೀರಿಸಲಾದಗೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಹೂವಿನ ಕೃಷಿ ಮಾಡಿ ನಿತ್ಯವೂ ಕೈ ತುಂಬಾ ಹಣ ಸಂಪಾದನೆ ಮಾಡುತ್ತಿರುವ ಮೋಟೆಬೆನ್ನೂರಿನ ಪ್ರಗತಿಪರ ರೈತ ಅಶೋಕ ಅಗಡಿ ಜಿಲ್ಲೆಯ ರೈತರಿಗೆ ಮಾದರಿ.

ನೀರಿನ ಮೂಲ ಅರ್ಥೈಸಿಕೊಳ್ಳದೇ ಕೊಳವೆಬಾವಿ ನೀರು ನೆಚ್ಚಿ ಒಬ್ಬರನ್ನು ನೋಡಿ ಒಬ್ಬರು ಕಬ್ಬು, ಅಡಿಕೆ, ತೆಂಗು ಬೆಳೆಯಲು ಹೋಗಿ ಕೈ ಸುಟ್ಟುಕೊಂಡವರ ಮಧ್ಯೆ ತುಸುವೇ ನೀರು, ಕಡಿಮೆ ಖರ್ಚಿನಲ್ಲಿ ಇವರು ಹೂವಿನ ಬಂಪರ್‌ ಬೆಳೆ ತೆಗೆದಿದ್ದಾರೆ.

ನಿರ್ವಹಣೆ ಸುಲಭವಲ್ಲ:ತಂಪಾದ ವಾತಾವರಣದಲ್ಲಿ ಹೂವು ಬೆಳೆಯುವುದನ್ನು ನಾವು ಕೇಳಿದ್ದೇವೆ. ಅದಾಗ್ಯೂ ಬೆಳೆದಂತಹ ಹೂವು 24 ಗಂಟೆಗಳಲ್ಲಿ ಕಟಾವಾಗಿ ಮಾರಾಟವಾದರಷ್ಟೇ ರೈತನಿಗೆ ಕೈಗೆ ಒಂದಿಷ್ಟು ಹಣ. ಇಲ್ಲದಿದ್ದರೆ ಇದ್ದಲ್ಲೇ ಮಣ್ಣಾಗುವಂತಹ ಹೂವು ಆತನ ಕಣ್ಣಲ್ಲಿ ನೀರು ಬರಿಸದೇ ಇರಲಾರದು.

ಶೇ. 40ರಷ್ಟು ನೀರು ಬಳಕೆ: ಕಬ್ಬು,ಭತ್ತ, ಅಡಿಕೆ, ತೆಂಗು ಇವುಗಳೆಲ್ಲವೂ ದೀರ್ಘ ಕಾಲದವರೆಗೆ ನೀರಿನ ಬಳಕೆ ಮಾಡಬೇಕಾಗುತ್ತದೆ, ಅವುಗಳಿಗೆ ಹೋಲಿಕೆ ಮಾಡಿದೇ ಶೇ. 40 ರಷ್ಟು ನೀರಿನಲ್ಲಿಯೇ ಹೂವಿನ ಕೃಷಿ ನಡೆಸಲು ಸಾಧ್ಯ.

ಸುಮಾರು 10 ರಿಂದ 15 ದಿನಕ್ಕೊಮ್ಮೆ ಮೊಗ್ಗಿನ ಗಿಡಗಳಿಗೆ ನೀರು ಹರಿಸಿದರೇ ಸಾಕು ನಿತ್ಯವೂ ಕೈತುಂಬ ಹಣ ನೀಡಲಿದೆ ಈ ಹೂವಿನ ಕೃಷಿ.

27 ವರ್ಷದ ಸಾಧನೆ:ಅಶೋಕ ಅಗಡಿ ತಮ್ಮ 2 ಎಕರೆಯಲ್ಲಿ ಹೂವಿನ ಕೃಷಿ ನಡೆಸುತ್ತಿದ್ದು, ಸದ್ಯ ಇದರಲ್ಲಿ 1 ಎಕರೆ ನಂದಿ (ಬಟ್ಲ) ಮೊಗ್ಗು ಇನ್ನೊಂದು ಎಕರೆಯಲ್ಲಿ ಕಾಕಡ ಮಲ್ಲಿಗೆ ಬೆಳೆಯುತ್ತಿದ್ದಾರೆ.

ಕಳೆದ 27 ವರ್ಷದಿಂದ ಹೂವಿನ ಕೃಷಿ ಮಾಡುತ್ತಿದ್ದು, ಆರಂಭದಲ್ಲಿ ಮೈಸೂರು ಮಲ್ಲಿಗೆ, ಚರಿಷ್ಮಾ, ಬಟನ್ ರೋಸ್ ಬೆಳೆಯುತ್ತಿದ್ದ ಅವರು ಇದೀಗ ನಂದಿ (ಬಟ್ಲ) ಮೊಗ್ಗು, ಕಾಕಡ ಮಲ್ಲಿಗೆ ಬೆಳೆಯುತ್ತಿದ್ದಾರೆ. ಮೊದಲು ಮೂರು ತಳಿಗಳಿಗೆ ಕೂಲಿ ಕಾರ್ಮಿಕರು ಹೆಚ್ಚಾಗಿ ಬೇಕಾಗಿದ್ದರಿಂದ ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಇದೀಗ ನಂದಿ ಹಾಗೂ ಕಾಕಡ ಮಾತ್ರ ಬೆಳೆಯುತ್ತಿದ್ದಾರೆ.

10 ಲಕ್ಷ ಆದಾಯ: ಹೂವಿನ ಕೃಷಿಯಲ್ಲಿ ಮಾತ್ರ ರೈತರು ನಿತ್ಯವೂ ಹಣ ನೋಡಬಹುದು. ಆರಂಭದಲ್ಲಿ ಸ್ವಲ್ಪಮಟ್ಟಿಗೆ ಹಣ ವ್ಯಯಿಸಿದ್ದನ್ನು ಬಿಟ್ಟರೆ ಬಳಿಕ ನಿತ್ಯವೂ ರೈತರ ಕೈಯಿಗೆ ಹಣ ಸಿಗಲಿದೆ. ಪ್ರತಿ ಎಕರೆಗೆ ಪ್ರತಿದಿನ ಕನಿಷ್ಟವೆಂದರೂ 2 ಸಾವಿರಕ್ಕಿಂತ ಹೆಚ್ಚು ಆದಾಯ (ಮಾರುಕಟ್ಟೆ ದರ ಆಧರಿಸಿ) ನೀಡಲಿದೆ. ಹೀಗೆಯೇ ವರ್ಷದ 8 ತಿಂಗಳು ಕಾಲ ಸುಮಾರು ₹10 ಲಕ್ಷಕ್ಕೂ ಅಧಿಕ ಆದಾಯ ನೀಡಲಿದೆ.

ಸುಖ ಮತ್ತು ದುಃಖ ಎರಡೂ ಸಂದರ್ಭಗಳಲ್ಲಿ ಬಳಕೆಯಾಗುವಂತಹ ವಸ್ತು ಹೂವು. ಹೀಗಾಗಿ ಇದಕ್ಕೆ ನಿತ್ಯವೂ ಬೇಡಿಕೆ ಇರಲಿದೆ. ಕೂಲಿ ಕಾರ್ಮಿಕರಿಗೆ ನಿತ್ಯವೂ ಕೆಲಸ ಕೊಡಬಹುದಾದ ಕೃಷಿ ಇದಾಗಿದ್ದು ಹೂ ಮಾರಲು ದೊಡ್ಡ ಮಾರ್ಕೆಟ್ ಅವಶ್ಯವಿಲ್ಲ. ಇದ್ದಲ್ಲಿಗೇ ಬಂದು ಮೊಗ್ಗುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕಳೆದ 27 ವರ್ಷದಿಂದ ಮಾಡುತ್ತಾ ಬಂದಿದ್ದೇನೆ. ನನಗೆ ಲುಕ್ಸಾನು ಕಂಡಿದ್ದೇ ಗೊತ್ತಿಲ್ಲ ಎಂದು ರೈತ ಅಶೋಕ ಅಗಡಿ ಹೇಳಿದ್ದಾರೆ.