ಮುಜರಾಯಿ ಅಥವಾ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಲ್ಲಿ ಯಾವುದೇ ಟೆಂಡರ್ ಪಡೆದ ಗುತ್ತಿಗೆದಾರ ನಾಲ್ಕು ಕಂತುಗಳಲ್ಲಿ ದೇವಸ್ಥಾನಕ್ಕೆ ಹಣ ಸಂದಾಯ ಮಾಡಬೇಕು
ಎಂ. ಪ್ರಹ್ಲಾದ್ ಕನಕಗಿರಿ
ಇಲ್ಲಿನ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಸಗಟು ವ್ಯಾಪಾರದಲ್ಲಿ ಭಕ್ತರಿಗೆ ಮೋಸವಾಗುತ್ತಿದೆ ಎನ್ನುವ ಆಕ್ಷೇಪ ಕೇಳಿಬರುತ್ತಿದೆ.ಟೆಂಡರ್ ನಿಯಮದಂತೆ ಜೋಡಿ ತೆಂಗಿನಕಾಯಿಗೆ ₹60 ಪಡೆಯಬೇಕು. ಆದರೆ ₹80ರಿಂದ ₹100 ಪಡೆಯುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
ಇಲ್ಲಿನ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಸಗಟು ವ್ಯಾಪಾರಕ್ಕೆ 2025ರ ಏ. 19ರಂದು ಬಹಿರಂಗ ಹರಾಜು ಪ್ರಕ್ರಿಯೆ ನಡೆದಿತ್ತು. ಸ್ಥಳೀಯ ತೆಂಗಿನಕಾಯಿ ವ್ಯಾಪಾರಿ ಪ್ರಕಾಶ ತೆಂಗಿನಕಾಯಿ ಅವರಿಗೆ 11 ತಿಂಗಳ ಅವಧಿಗೆ ₹29 ಲಕ್ಷಗೆ ಟೆಂಡರ್ ಆಗಿತ್ತು. ಆದರೆ ಈಗ ತೆಂಗಿನಕಾಯಿ ಮಾರಾಟಕ್ಕೆ ನಿಗದಿಪಡಿಸಿದಂತೆ ಜಾಗ ವಿಸ್ತರಿಸಿ ಆದೇಶಿಸಬೇಕೆನ್ನುವ ಬೇಡಿಕೆ ಮುಂದಿಟ್ಟುಕೊಂಡು ಟೆಂಡರ್‌ದಾರರು ಕ್ಯಾತೆ ತೆಗೆದಿದ್ದಾರೆ. ಟೆಂಡರ್ ಮೊತ್ತ ಭರಿಸಲು ಆಗುವುದಿಲ್ಲ. ಈ ಟೆಂಡರ್‌ನಿಂದ ನಮಗೆ ನಷ್ಟವಾಗಲಿದೆ ಎಂದು ಹೇಳುತ್ತಿದ್ದಾರೆ. ಮರು ಟೆಂಡರ್ ಮಾಡುವಂತೆ ದೇವಸ್ಥಾನಕ್ಕೆ ಪತ್ರ ಬರೆದಿದ್ದಾರೆ.ನಿಯಮದಲ್ಲಿ ಏನಿದೆ?:
ಮುಜರಾಯಿ ಅಥವಾ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಲ್ಲಿ ಯಾವುದೇ ಟೆಂಡರ್ ಪಡೆದ ಗುತ್ತಿಗೆದಾರ ನಾಲ್ಕು ಕಂತುಗಳಲ್ಲಿ ದೇವಸ್ಥಾನಕ್ಕೆ ಹಣ ಸಂದಾಯ ಮಾಡಬೇಕು. ಬಹಿರಂಗ ಹರಾಜಿನಲ್ಲಿ ಆಗಿರುವ ಮೊತ್ತಕ್ಕಿಂತ ಕಡಿಮೆ ಮೊತ್ತ ಸಂದಾಯ ಮಾಡುವುದು ನಿಯಮ ಬಾಹಿರವಾಗಲಿದೆ. ಹರಾಜು ಸಂದರ್ಭದಲ್ಲಿ ಸಾರ್ವಜನಿಕರು ಅಭಿಪ್ರಾಯ ಪಡೆದು ಕನಕಾಚಲ ದೇಗುಲದಿಂದ ವಾಲ್ಮೀಕಿ ವೃತ್ತದ ವರೆಗೆ ಜಾಗ ನೀಡಲು ನಿಶ್ಚಯಿಸಲಾಗಿತ್ತು. ಆದರೆ, ವಾಲ್ಮೀಕಿ ವೃತ್ತದ ಸುತ್ತಮುತ್ತಲಿನ ಜಾಗ ಎಪಿಎಂಸಿಗೆ ಸಂಬಂಧಿಸಿದ್ದಾಗಿದ್ದರಿಂದ ಇಲ್ಲಿ ಕಾಯಿ ಮಾರಾಟ ಮಾಡಲು ಬಿಡುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರಿಗೆ ಕಾಯಿ ಮಾರಾಟಕ್ಕೆ ತೊಂದರೆಯಾಗಿದೆ, ನಮಗೂ ನಷ್ಟವಾಗಲಿದೆ ಎಂಬುದು ಟೆಂಡರದಾರರ ವಾದ. ಮರು ಟೆಂಡರ್ ಮಾಡುವಂತೆ ದೇವಸ್ಥಾನಕ್ಕೆ ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ದೇವಸ್ಥಾನ ಸಮಿತಿಯಿಂದಲೂ ಟೆಂಡರ್‌ದಾರನಿಗೆ ಮೂರು ದಿನದೊಳಗೆ ಉತ್ತರಿಸುವಂತೆ ನೋಟಿಸ್ ನೀಡಲಾಗಿದೆ.ಕಟ್ಟುನಿಟ್ಟಿನ ಕ್ರಮವಾಗಲಿ:ಹರಾಜಿನಲ್ಲಿ ನಿರ್ಣಯವಾದಂತೆ ಜೋಡಿ ತೆಂಗಿನಕಾಯಿಗೆ ₹60 ಇದ್ದದ್ದು ಏಕಾಏಕಿ ನೂರು ಆಗಿದೆ. ತೆಂಗಿನಕಾಯಿ ದರ ನಿಗದಿ ಹೆಚ್ಚಿಗೆ ಮಾರಾಟವಾಗುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಸ್ವತಃ ಅಧಿಕಾರಿ, ಸಿಬ್ಬಂದಿಯವರು ಕಾಯಿ ಖರೀದಿಸುವ ಭಕ್ತರನ್ನು ವಿಚಾರಿಸಿ ಖಾತ್ರಿ ಪಡಿಸಿಕೊಂಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ಭಕ್ತರು ಹೇಳುತ್ತಾರೆ.
ಮರು ಟೆಂಡರ್‌ಗೆ ವಿರೋಧ: ಹರಾಜು ಆಗುವ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ದೇವಸ್ಥಾನದ ನಿಯಮಗಳಿಗೆ ಸಹಮತ ಸೂಚಿಸಿ ಕಾಯಿ ಟೆಂಡರ್ ಪಡೆದಿರುವವರು ಈಗ ನಷ್ಟ ಹಾಗೂ ಜಾಗ ವಿಸ್ತರಣೆ ಬಗ್ಗೆ ಕ್ಯಾತೆ ತೆಗೆದು ಟೆಂಡರ್‌ನಿಂದ ಜಾರಿಕೊಳ್ಳುವ ಯತ್ನದಲ್ಲಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಸ್ಥಳೀಯ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ದರ ಹೆಚ್ಚಿಸಿದ್ದರಿಂದ ತೆಂಗಿನಕಾಯಿ ಖರೀದಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಭಕ್ತರ ಸುಲಿಗೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ.ಕನಕಾಚಲಪತಿ ದೇಗುಲದ ತೆಂಗಿನಕಾಯಿ ಹರಾಜು ತೆಗೆದುಕೊಂಡ ಟೆಂಡರ್‌ದಾರರಿಗೆ ಬಾಕಿ ಮೊತ್ತ ಸಂದಾಯ ಮಾಡಬೇಕು. 8 ತಿಂಗಳ ನಂತರ ಮರು ಟೆಂಡರ್ ಮಾಡಲು ಆಗುವುದಿಲ್ಲ. ಹಣ ಸಂದಾಯ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.
ಜೋಡಿ ಕಾಯಿಗೆ ನೂರು ಮಾರಾಟ ಮಾಡಿಲ್ಲ. ಭಕ್ತರಿಗೆ ಜೋಡಿ ಕಾಯಿ, ನಿಂಬೆಹಣ್ಣು, ಉದಿನಕಡ್ಡಿ, ಎಣ್ಣೆ, ಬತ್ತಿ ನೀಡಿ ನೂರು ತೆಗೆದುಕೊಂಡಿದ್ದೇವೆ. ಭಕ್ತರಿಗೆ ಮೋಸ ಮಾಡಿಲ್ಲ. ಇಲ್ಲ-ಸಲ್ಲದ ಆರೋಪಗಳು ಬರುತ್ತಿದ್ದರಿಂದ ಮರು ಟೆಂಡರ್ ಮಾಡುವಂತೆ ಹಲವು ತಿಂಗಳ ಹಿಂದೆಯೇ ದೇವಸ್ಥಾನಕ್ಕೆ ಪತ್ರ ಬರೆದಿದ್ದೇನೆ. ದೇವಸ್ಥಾನ ಸಮಿತಿ ತೀರ್ಮಾನಕ್ಕೆ ಬದ್ಧನಾಗಿರುವೆ ಎಂದು ತೆಂಗನಕಾಯಿ ಟೆಂಡರದಾರ ಪ್ರಕಾಶ ಟಿ ತಿಳಿಸಿದ್ದಾರೆ.