ಸಾರಾಂಶ
ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಪೊಲೀಸರು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಪೊಲೀಸರು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.ಶನಿವಾರ ರಾತ್ರಿ ಅಶೋಕನಗರ ಠಾಣೆ ಪೊಲೀಸರು ರೆಸಿಡೆನ್ಸಿ ರಸ್ತೆಯಲ್ಲಿ ವಾಹನಗಳ ತಪಾಸಣೆ ಮಾಡುವಾಗ ಕಾರೊಂದರಲ್ಲಿ 13.16 ಲಕ್ಷ ರು. ನಗದು ಇರುವುದು ಪತ್ತೆಯಾಗಿದೆ.ತಮಿಳುನಾಡಿನ ಹೊಸೂರು ಮೂಲದ ನಾರಾಯಣ್ (53) ಎಂಬುವವರು ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಕಾರನ್ನು ತಪಾಸಣೆ ಮಾಡಿದಾಗ 13.16 ಲಕ್ಷ ರು. ನಗದು ಪತ್ತೆಯಾಗಿದೆ. ನಾರಾಯಣ್ ಹೊಸೂರಿನಲ್ಲಿ ಕೋಳಿ ಫಾರಂ ಹೊಂದಿದ್ದು, ಬೆಂಗಳೂರಿನ ವಿವಿಧೆಡೆ ಅಂಗಡಿಗಳಿಗೆ ಕೋಳಿ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳಿಂದ ಹಣ ಸಂಗ್ರಹಿಸಿಕೊಂಡು ಹೊಸೂರಿಗೆ ತೆರಳುತ್ತಿದ್ದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ವಿಚಾರ ನನಗೆ ತಿಳಿದಿರಲಿಲ್ಲ ಎಂದು ನಾರಾಯಣ್ ವಿಚಾರಣೆ ವೇಳೆ ಹೇಳಿದ್ದಾರೆ. ಸದ್ಯ ನಗದು ಹಣವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿರುವ ಅಶೋಕನಗರ ಠಾಣೆ ಪೊಲೀಸರು, ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಣ ಬಿಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.