ಎಂ.ಬಿ. ವಿನ್ಸೆಂಟ್ ಸುಂಟಿಕೊಪ್ಪ
ಕೊಡಗಿನ ಕಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಲ್ಲಿ ಕಾಫಿಗೆ ಮೊದಲ ಸ್ಥಾನ. ಕೊಡಗಿನಲ್ಲಿ ಎಲ್ಲಿ ನೋಡಿದರೂ ಕಾಫಿ ತೋಟಗಳೇ ಕಾಣಸಿಗುತ್ತವೆ. ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಈ ಕಾಫಿಯನ್ನು ಬೆಳೆಯಲಾಗುತ್ತದೆ. ಆದರೆ ವಿಶೇಷವೆಂದರೆ ಶೇ. 90ರಷ್ಟು ಭಾಗ ಕಾಫಿ ಬೆಳೆಯುತ್ತಿರುವವರು ಸಣ್ಣ ರೈತರಾಗಿದ್ದಾರೆ. ಅದ್ಭುತ ಸ್ವಾದವನ್ನು ಹೊಂದಿರುವ ಕೊಡಗಿನ ಕಾಫಿ ಜರ್ಮನಿ, ರಷ್ಯಾ, ಅಮೆರಿಕ, ಜಪಾನ್, ಗ್ರೀಸ್, ನೆದರ್ಲ್ಯಾಂಡ್, ಫ್ರಾನ್ಸ್ ದೇಶಗಳಿಗೆ ರಫ್ತಾಗುತ್ತದೆ. ಇಟಲಿ ದೇಶವು ಅತಿ ಹೆಚ್ಚು ಕೊಡಗಿನ ಕಾಫಿಯನ್ನು ಆಮದು ಮಾಡಿಕೊಳ್ಳುತ್ತದೆ.ಅತ್ಯುತ್ತಮ ಸ್ವಾದ ಹೊಂದಿರುವ ಈ ಕಾಫಿಯನ್ನು ಇಂಡಿಯನ್ ಮಾನ್ಸೂನ್ಡ ಕಾಫಿ ಎಂದು ಕೂಡ ಕರೆಯಲಾಗುತ್ತದೆ. 1970ರಿಂದ ಕೊಡಗಿನಲ್ಲಿ ಕಾಫಿ ಬೆಳೆಯುವ ವೇಗವಾಗಿ ಬೆಳೆಯಿತು. ಇದರಿಂದ ಕೊಡಗಿನಲ್ಲಿ ಅತಿ ಹೆಚ್ಚು ಕಾಫಿ ಬೆಳೆಯಲು ಅನುಕೂಲವಾಯಿತು. ಕೊಡಗಿಗೆ ಕಾಫಿಯನ್ನು ಬ್ರಿಟಿಷರು ಪರಿಚಯಿಸಿದರು. ಅರೆಬಿಕಾ ಹಾಗೂ ರೋಬೆಸ್ಟಾ ಎಂಬ ಎರಡು ತಳಿಗಳಿವೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 1,04,890 ಹೆಕ್ಟೇರ್ ಪ್ರದೇಶದಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದ್ದು, 76,927 ಹೆಕ್ಟೇರ್ ಪ್ರದೇಶದಲ್ಲಿ ರೋಬೆಸ್ಟಾ ಹಾಗೂ 27,963 ಹೆಕ್ಟೇರ್ ಪ್ರದೇಶದಲ್ಲಿ ಅರೆಬಿಕಾ ಬೆಳೆಸಲಾಗುತ್ತಿದೆ. ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕದಿಂದ ಶೇ.70 ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಕೊಡಗಿನಲ್ಲಿ ಶೇ. 40 ರಷ್ಟು ಕಾಫಿ ಉತ್ಪಾದನೆ ಮಾಡಲಾಗುತ್ತದೆ.ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೆಬಿಕಾ ಕಾಫಿ ತೋಟಗಳಿವೆ. ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಅರೆಬಿಕಾ ಕಾಫಿ ತೋಟಗಳಿವೆ. ರೋಬೆಸ್ಟಾ ಕಾಫಿ ಡಿಸೆಂಬರ್‌ನಲ್ಲಿ ಹಣ್ಣಾಗುತ್ತದೆ. ಕೊಡಗಿನ ಕಾಫಿ ಬೆಳೆಗಾರರು ಇತ್ತೀಚೆಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಡಾನೆ ಹಾವಳಿ, ಕಾರ್ಮಿಕರ ಸಮಸ್ಯೆ, ಹವಾಮಾನ್ಯ ವೈಪರೀತ್ಯದ ಸಮಸ್ಯೆಗೆ ಸಿಲುಕಿದ್ದಾರೆ.ಕಾಳು ಮೆಣಸು ಕೃಷಿ: ಕೊಡಗಿನಲ್ಲಿ ಕಾಳು ಮೆಣಸು ಉಪ ಬೆಳೆಯಲಾಗಿದೆ. ಕಾಫಿ ತೋಟಗಳ ಮಧ್ಯೆ ಬೆಳೆಸಿರುವ ಮರಗಳಲ್ಲಿ ಕಾಳು ಮೆಣಸನ್ನು ಬೆಳೆಸಲಾಗಿದ್ದು, ಇದರಿಂದಲೂ ಬೆಳೆಗಾರರು ಆದಾಯವನ್ನು ಗಳಿಸುತ್ತಿದ್ದಾರೆ. ಕಾಫಿಯಿಂದ ನಷ್ಟ ಸಂಭವಿಸಿದರೆ ಕಾಳು ಮೆಣಸು ಬೆಳೆಗಾರರ ಕೈ ಹಿಡಿಯುತ್ತದೆ. ಕಾಫಿಯ ನಾಡಾಗಿ ಪ್ರಸಿದ್ದಿ ಪಡೆದಿರುವ ಕೊಡಗು ಜಿಲ್ಲೆಯ ಬಹುತೇಕ 10 ಎಕರೆಗೆ ಒಳಪಟ್ಟ ಸಣ್ಣ ಕಾಫಿ ಬೆಳೆಗಾರರನ್ನು ಹೊಂದಿದ್ದು, ಇವರೆಲ್ಲರ ಕಾಫಿ ತೋಟಗಳಲ್ಲಿ ಹೆಚ್ಚಾಗಿ ಮಿಶ್ರ ಬೆಳೆಯಾಗಿ ಕಪ್ಪು ಬಂಗಾರ ಎಂದೇ ಪ್ರಖ್ಯಾತಿಯ ಕಾಳುಮೆಣಸನ್ನು ಸಾಂಪ್ರದಾಯಿಕ ಬೆಳೆಯಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ.ಕರ್ನಾಟಕದಲ್ಲಿ ವಾರ್ಷಿಕ 28,000 ಮೆಟ್ರಿಕ್ ಟನ್ ಕಾಳು ಮೆಣಸು ಬೆಳೆಯಲಾಗುತ್ತದೆ. ಭಾರತದ ಉತ್ಪಾದನೆ 40-50 ಸಾವಿರ ಮೆಟ್ರಿಕ್ ಟನ್ ಆಗಿದೆ. ಪುಟ್ಟ ಜಿಲ್ಲೆ ಕೊಡಗಿನಲ್ಲಿ 5,000 ಮೆಟ್ರಕ್ ಟನ್ ಮೆಣಸು ಬೆಳೆಯಲಾಗುತ್ತಿದೆ.