ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪ್ರಸ್ತುತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಮುಂದಿನ ದಿನಗಳಲ್ಲಿ ಕಾಫಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದ್ದು, ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕೆಂದು ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದ ಬೆಳೆಗಾರರ ನಿಯೋಗ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರಿಗೆ ಮನವಿ ಸಲ್ಲಿಸಿದೆ.ಸೋಮವಾರಪೇಟೆಗೆ ಆಗಮಿಸಿದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್ ಅವರನ್ನು ಭೇಟಿಯಾದ ಪ್ರಮುಖರು, ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ನಷ್ಟಗಳ ಕುರಿತು ವಿವರಿಸಿದರು.ಅತಿ ಹೆಚ್ಚು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಜನವರಿಯಿಂದ ಜೂನ್ ಅಂತ್ಯಕ್ಕೆ ೭೦ರಿಂದ ೧೦೦ ಇಂಚಿನಷ್ಟು ಮಳೆಯಾಗಿದೆ. ಅತಿಯಾದ ಮಳೆಯಿಂದ ಸಕಾಲದಲ್ಲಿ ಕೃಷಿ ಚಟುವಟಿಕೆ ನಡೆಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಮೂರು ತಿಂಗಳು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಕಾಫಿ ಕೃಷಿಗೆ ಕೊಳೆರೋಗ ಎದುರಾಗುವ ಸಾಧ್ಯತೆ ಇದೆ.ಇದರಿಂದ ಮುಂದೆ ನಿರೀಕ್ಷಿಸಿದಷ್ಟು ಕಾಫಿ ಫಸಲು ಕೈಸೇರುವುದು ಅಸಾಧ್ಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ಕಾಫಿ ಮಂಡಳಿ ಕಾಫಿ ಕ್ಷೇತ್ರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಈಗಿನಿಂದಲೇ ಅಧ್ಯಯನ ನಡೆಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳ ಬೆಳೆಗಾರರು ಮನವಿ ಮಾಡಿದರು.ಕಾಫಿ ಬೆಳೆಗಾರರ ಸಂಕಷ್ಟದ ಕುರಿತು ಶಾಸಕ ಡಾ.ಮಂತರ್ ಗೌಡ ಅವರು ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರಿಗೆ ಮನವರಿಕೆ ಮಾಡಿಕೊಟ್ಟರು.ಈ ಸಂದರ್ಭ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮತ್ತು ಪದಾಧಿಕಾರಿಗಳು, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಸತೀಶ್ ಮತ್ತು ಕಾಫಿ ಬೆಳೆಗಾರರು ಇದ್ದರು.