ಅಂಕನಾಯಕನಹಳ್ಳಿ ಕೆರೆಗೆ ಬಿದ್ದ ಕಾಫಿ ಲಾರಿ

| Published : Mar 07 2024, 01:47 AM IST

ಸಾರಾಂಶ

ಅರಕಲಗೂಡು ಪಟ್ಟಣ ಸಮೀಪದ ಅಂಕನಾಯಕನಹಳ್ಳಿ ಕೆರೆಗೆ ಕಾಫಿ ಚೀಲ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಕಾಫಿ ಬೀಜ ನೀರುಪಾಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.

ಲಕ್ಷಾಂತರ ರು. ಮೌಲ್ಯದ ಕಾಫಿ ಬೀಜ ನಾಶ । ಅಲ್ಲಾನಕಾಫಿಕ್ಯೂರಿಂಗ್‌ಗೆ 15 ಟನ್‌ ಕಾಫಿ ಸಾಗಿಸುತ್ತಿದ್ದ ಲಾರಿ

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣ ಸಮೀಪದ ಅಂಕನಾಯಕನಹಳ್ಳಿ ಕೆರೆಗೆ ಕಾಫಿ ಚೀಲ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಕಾಫಿ ಬೀಜ ನೀರುಪಾಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.

ವೀರಾಜಪೇಟೆಯ ತಾಲೂಕು ಶ್ರೀಮಂಗಳ ಗ್ರಾಮದಿಂದ ಹಾಸನದ ಅಲ್ಲಾನಕಾಫಿಕ್ಯೂರಿಂಗ್‌ಗೆ ಕಾಫಿ ಬೀಜವನ್ನು ಸಾಗಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಕೆರೆ ಒಳಗೆ ಚಲಿಸಿದೆ. ಇದರಿಂದ ಲಾರಿಯು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಚಾಲಕ ಈಜಿ ದಡ ಸೇರಿದ್ದಾರೆ. ಲಾರಿಯಲ್ಲಿ 15 ಟನ್ ಕಾಫಿ ಚೀಲ ಇತ್ತು ಎನ್ನಲಾಗಿದೆ.

ನೀರಿನಲ್ಲಿ ಲಾರಿ ಚಲಿಸಿದ ಪರಿಣಾಮ ಕಾಫಿ ಬೀಜ ತುಂಬಿದ ನೂರಕ್ಕೂ ಹೆಚ್ಚು ಚೀಲಗಳು ನೀರಿನಲ್ಲಿ ಮುಳುಗಿವೆ. ಅಲ್ಲದೆ ಹಲವು ಚೀಲಗಳು ಒಡೆದು ಕೆರೆಯ ಅಂಗಳದಲ್ಲಿ ತೇಲುತ್ತಿರುವುದು ಕಂಡು ಬಂದಿತು. ಮಂಗಳವಾರ ಬೆಳಿಗ್ಗೆ ಲಾರಿಯ ಮಾಲೀಕ ಮತ್ತು ಕಾಫಿ ಬೀಜದ ಮಾಲೀಕರು ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ತೇಲುತ್ತಿದ್ದ ಕಾಫಿ ಬೀಜ ಹಾಗೂ ತುಂಬಿದ ಚೀಲವನ್ನು ಸಂಗ್ರಹಿಸಿ ದಡಕ್ಕೆ ಹಾಕಿಸಿದರು. ಸುಮಾರು 15 ರಿಂದ 20 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಪದೇ ಪದೇ ಮರುಕಳಿಸುವ ವಾಹನ ಅವಘಡ:

ಪಿರಿಯಾಪಟ್ಟಣ-ಹಾಸನ ನಡುವಿನ ರಾಜ್ಯ ಹೆದ್ದಾರಿ ರಸ್ತೆಯನ್ನು 2018ರಲ್ಲಿ ಅಭಿವೃದ್ಧಿಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಅಂಕನಾಯಕನಹಳ್ಳಿ ಕೆರೆ ಬಳಿ ಅಭಿವೃದ್ಧಿಗೊಳಿಸಿರುವ ರಸ್ತೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಇದರಿಂದ ಪ್ರತಿ ತಿಂಗಳಿಗೊಮ್ಮೆ ವಾಹನ ಅಪಘಾತಗಳು ಮರುಕಳಿಸುತ್ತಿವೆ. ಅಂದಾಜು ಐದಾರು ಮಂದಿ ಈ ಜಾಗದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಸಾಗಿರುವ ಎರಡು ಬದಿಯಲ್ಲಿ ಯಾವಾಗಲೂ ನೀರು ತುಂಬಿರುವ ಕೆರೆ, ಮತ್ತೊಂದು ಬದಿಯಲ್ಲಿ ಆಳದಲ್ಲಿರುವ ಗದ್ದೆ ಪ್ರದೇಶವಿದೆ.

ಜತೆಗೆ ರಸ್ತೆ ಸಂಪೂರ್ಣವಾಗಿ ತಿರುವಿನಿಂದ ಕೂಡಿರುವ ಪರಿಣಾಮ ವಾಹನ ಚಾಲಕರು ಕ್ಷಣಮಾತ್ರ ಮೈಮರೆತರೂ ಅಪಘಾತ ಉಂಟಾಗುತ್ತದೆ. ರಸ್ತೆ ತಿರುವ ಸರಿಪಡಿಸುವ ಕುರಿತು ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದರೂ ಕೂಡ ಶಾಶ್ವತವಾಗಿ ಕೆರೆ ಮತ್ತು ಗದ್ದೆ ಪ್ರದೇಶ ಕಡೆ ತಾಂತ್ರಿಕ ತಡೆಗೋಡೆ ನಿರ್ಮಿಸಿಲ್ಲ. ಅಲ್ಲದೆ ಸರ್ಕಾರಿ ಜಾಗವಿದ್ದು, ರಸ್ತೆಯನ್ನು ತಿರುವು ಮುಕ್ತಗೊಳಿಸಿದರೆ ಅಪಘಾತವನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಕೆಆರ್‌ಡಿಸಿಎಲ್‌ನವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ ಅಧ್ಯಕ್ಷ ವಿ.ಎ.ನಂಜುಂಡಸ್ವಾಮಿ ಮನವಿ ಮಾಡಿದ್ದಾರೆ.ಅರಕಲಗೂಡಿನ ಅಂಕನಾಯಕನಹಳ್ಳಿ ಕೆರೆಯಲ್ಲಿ ಕಾಫಿ ಲಾರಿ ಮುಳುಗಿದ ಪರಿಣಾಮ ತೇಲುತ್ತಿರುವ ಕಾಫಿ ಬೀಜ ಮತ್ತು ಚೀಲವನ್ನು ಸಂಗ್ರಹಿಸುತ್ತಿರುವ ಕಾರ್ಮಿಕರು.