ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬದುಕಿನ ಪ್ರೀತಿಯು ಸಾಹಿತ್ಯದಿಂದ ಇಮ್ಮಡಿಯಾಗುತ್ತದೆ. ಸಾಹಿತ್ಯವು ಜೀವನದಲ್ಲಿ ಉತ್ಸಾಹಿಗಳಾಗಿ ಬದುಕಲು ಪ್ರೇರೇಪಿಸುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿರಿಯ ಸಾಹಿತಿಗಳಾದ ಎ.ಕೆ.ರಾಮೇಶ್ವರ ಅವರು ಸಲ್ಲಿಸಿದ ಅಗಾಧ ಸಾಹಿತ್ಯ ಸೇವೆ ಅನುಪಮವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.ನಗರದ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ರಾಷ್ಟ್ರಕೂಟ ಪುಸ್ತಕ ಮನೆ, ಸೇಡಂ ಹಾಗೂ ಕವಿರಾಜಮಾರ್ಗ ಪ್ರಕಾಶನ ಕಲಬುರಗಿ ಸಹಯೋಗದಲ್ಲಿ ಹಿರಿಯ ಮಕ್ಕಳ ಸಾಹಿತಿ ಶ್ರೀ ಎ.ಕೆ.ರಾಮೇಶ್ವರ ಅವರ `ಸಾಹಿತ್ಯ ಸಂಭ್ರಮ’ದಲ್ಲಿ ಮಹಿಪಾಲರೆಡ್ಡಿ ಮುನ್ನೂರ್ `ನುಡಿಸಾರಥ್ಯ’ದ `ಬಿಸಿಲನಾಡಿನ ಬೆಳದಿಂಗಳು’ ಎಂಬ ವಿಶಿಷ್ಟ ಕೃತಿಯನ್ನು ಹಾಗೂ ಎ.ಕೆ.ರಾಮೇಶ್ವರ ಬರೆದ `ಕೆಂಪು ಗುಲಾಬಿಯ ಕಂಪು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಲವು ವರ್ಷದ ಹಿಂದೆ ವಚನಗಳ ಸಂಪುಟಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ನೆನಪಿಸಿಕೊಂಡು, ನೇರ ಮಾತು, ಕನ್ನಡದ ಕಾಳಜಿ, ಸರಳ, ಸೌಜನ್ಯ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ಸಾಹಿತ್ಯಲೋಕದ ಭೀಷ್ಮ ರಾಮೇಶ್ವರ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 50 ವರ್ಷದ ಸಾಹಿತ್ಯಿಕ ಸೇವೆ ಗುರುತಿಸಿ, ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು, ಒಂದು ಲಕ್ಷ ರು. ಹಮ್ಮಿಣಿ ನೀಡಿ ಗೌರವಿಸುತ್ತಿರುವುದನ್ನು ಶ್ಲಾಘಿಸಿ, ಅಭಿನಂದಿಸುವುದಾಗಿ ಹೇಳಿದರು. ಮುಂದಿನ ಬರಹಗಾರರಿಗೆ ಮಾರ್ಗದರ್ಶನಕ್ಕಾಗಿ ಎ.ಕೆ.ರಾಮೇಶ್ವರ ಅವರ ಹೆಸರಿನ ಮೇಲೆ ಟ್ರಸ್ಟ್ ಅಥವಾ ಪ್ರತಿಷ್ಠಾನ ಸ್ಥಾಪನೆಗೆ 10 ಲಕ್ಷ ರು. ನೀಡುವುದಕ್ಕಾಗಿ ಸರಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ವಾಗ್ದಾನ ಮಾಡಿದರು.ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಅವರು `ಬಿಸಿಲನಾಡಿನ ಬೆಳದಿಂಗಳು’ ಕೃತಿಯನ್ನು ವಿಶ್ಲೇಷಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಇಂತಹ ಅಪರೂಪದ ಕೃತಿಯೊಂದು ಪ್ರಕಟವಾಗಿದ್ದಕ್ಕೆ ಸಂತಸವಾಗಿದೆ. ಅದೂ ಸಹ ಕಲ್ಯಾಣ ನಾಡಿನಿಂದ ಹೊರಬಂದಿದ್ದಕ್ಕೆ ಶ್ಲಾಘಿಸಿದರು.
ಕಾರ್ಯಕ್ರಮದ ಆಯೋಜಕರಾದ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಿ.ಎಸ್.ಮಾಲಿಪಾಟೀಲ ಕಾರ್ಯಕ್ರಮವನ್ನು ನಿರೂಪಿದರು. ಹಿರಿಯ ಸಂಗೀತ ನಿರ್ದೇಶಕ ಅಮರ ಹಿರೇಮಠ ಪ್ರಾರ್ಥನಾ ಗೀತೆ ಮತ್ತು ಎ.ಕೆ.ರಾಮೇಶ್ವರ ಅವರ ರಚಿಸಿದ ಕೆಲವು ಗೀತೆಗಳನ್ನು ಹಾಡಿದರು.ದಾಸೋಹಿಗಳಾದ ಬಿ.ಎಸ್.ದೇಸಾಯಿ ದಂಪತಿಗಳಿಗೆ ವಿಶೇಷ ಸನ್ಮಾನ ಹಾಗೂ `ಬಿಸಿಲನಾಡಿನ ಬೆಳದಿಂಗಳು’ ಕೃತಿಯ ಲೇಖಕರಿಗೆ ಮತ್ತು ಸಮಾರಂಭಕ್ಕೆ ಸಹಕರಿಸಿದ ಸಹೃದಯರಿಗೆ ಆತ್ಮೀಯ ಸನ್ಮಾನಿಸಲಾಯಿತು.
ಈ ನಾಡನ್ನು ಸಾಹಿತ್ಯದ ಮೂಲಕ ಸಮೃದ್ಧಗೊಳಿಸಿರುವ ಶ್ರೀ ಎ.ಕೆ.ರಾಮೇಶ್ವರ ಅವರಿಗೆ ಕಲಬುರಗಿ ನೆಲ ಧನ್ಯವಾದ ಹೇಳುವ ಹಿನ್ನೆಲೆಯಲ್ಲಿ `ಒಂದು ಲಕ್ಷ ರು. ಹಮ್ಮಿಣಿ’ ಕೊಟ್ಟು ಗೌರವಿಸಲಾಯಿತು. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ರಾಮೇಶ್ವರ ಅವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಕಾಣಿಕೆ ನೀಡಿ, ಒಂದು ಲಕ್ಷ ರು. ನಗದು ತುಂಬು ಗೌರವದಿಂದ ಸತ್ಕರಿಸಿದಾಗ, ಇಡೀ ಸಭಾಂಗಣ ಚಪ್ಪಾಳೆಯ ಅಭಿನಂದನೆ ಸಲ್ಲಿಸಿತು.ಕಸಾಪ ಮಾಜಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಅಂತಾರಾಷ್ಟ್ರೀಯ ಕಲಾವಿದ ಡಾ.ವಿ.ಜಿ.ಅಂದಾನಿ, ಲೇಖಕ ಪ್ರೊ.ರವೀಂದ್ರ ಕರ್ಜಗಿ, ಸಿದ್ದಪ್ಪ ತಳ್ಳಳ್ಳಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಭೀಮಣ್ಣ ಬೋನಾಳ, ಶಿವನಗೌಡ ಜೇವರ್ಗಿ, ಬಸವರಾಜ ಉಪ್ಪಿನ್, ಶಾಂತಾ ಪಸ್ತಾಪುರ, ಶಕುಂತಲಾ ಪಾಟೀಲ ಜಾವಳಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಲೇಖಕರಿಗೆ ಸನ್ಮಾನ: ಬಿಸಿಲನಾಡಿನ ಬೆಳದಿಂಗಳ ಕೃತಿಯಲ್ಲಿ ಲೇಖನ ಬರೆದ ಲೇಖಕರಾದ ಪ್ರಭಾಕರ ಜೋಶಿ, ಡಾ.ಎಂ.ಬಿ.ಕಟ್ಟಿ, ಡಾ.ವಿಶಾಲಾಕ್ಷಿ ಕರಡ್ಡಿ, ಗುರುಶಾಂತಯ್ಯ ಭಂಟನೂರು, ಡಾ.ಲಕ್ಷ್ಮೀ ಶಂಕರ ಜೋಶಿ, ಪ್ರೊ.ಶೋಭಾದೇವಿ ಚೆಕ್ಕಿ, ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಮಲ್ಲಿನಾಥ ತಳವಾರ, ಡಾ.ಶೈಲಜಾ ಬಾಗೇವಾಡಿ, ಡಿ.ಎಂ.ನದಾಫ, ಸುರೇಶ ಬಡಿಗೇರ, ಪರವಿನ್ ಸುಲ್ತಾನಾ, ಕಿರಣ್ ಪಾಟೀಲ ಡಾ.ಸುಜಾತಾ ಪಾಟೀಲ, ಡಾ.ಚಂದ್ರಕಲಾ ಬಿದರಿ ಅವರನ್ನು ಸತ್ಕರಿಸಲಾಯಿತು.10 ಲಕ್ಷ ರು. ವಾಗ್ದಾನ: ಎ.ಕೆ.ರಾಮೇಶ್ವರ ಅವರ ಹೆಸರಿನ ಮೇಲೆ ಟ್ರಸ್ಟ್ ಅಥವಾ ಪ್ರತಿಷ್ಠಾನ ಸ್ಥಾಪನೆಯ ಹಿನ್ನೆಲೆಯಲ್ಲಿ 10 ಲಕ್ಷ ರು. ನೀಡುವುದಕ್ಕಾಗಿ ಸರಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ವಾಗ್ದಾನ ಮಾಡಿದರು.
;Resize=(128,128))
;Resize=(128,128))
;Resize=(128,128))