ಅಂಜನಾದ್ರಿ ಹುಂಡಿಯಲ್ಲಿ ಪಾಕಿಸ್ತಾನದ ನಾಣ್ಯ

| Published : May 22 2024, 12:51 AM IST

ಅಂಜನಾದ್ರಿ ಹುಂಡಿಯಲ್ಲಿ ಪಾಕಿಸ್ತಾನದ ನಾಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ 56 ದಿನಗಳಲ್ಲಿ ₹30,21,253 ಸಂಗ್ರಹವಾಗಿದೆ. ಈ ಬಾರಿ ಪಾಕಿಸ್ತಾನದ ನಾಣ್ಯ ಸಂಗ್ರಹವಾಗಿರುವುದು ವಿಶೇಷವಾಗಿದೆ.

ಮೊರಾಕೊ, ಯುಎಸ್ಎ, ಶ್ರೀಲಂಕಾ, ನೇಪಾಳ ಸೇರಿ 5 ನಾಣ್ಯ ಸಂಗ್ರಹ

56 ದಿನಗಳಲ್ಲಿ ₹30,21,253 ಸಂಗ್ರಹಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ 56 ದಿನಗಳಲ್ಲಿ ₹30,21,253 ಸಂಗ್ರಹವಾಗಿದೆ. ಈ ಬಾರಿ ಪಾಕಿಸ್ತಾನದ ನಾಣ್ಯ ಸಂಗ್ರಹವಾಗಿರುವುದು ವಿಶೇಷವಾಗಿದೆ.

ಸಹಾಯಕ ಆಯುಕ್ತರು ಆಗಿರುವ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಆದೇಶದ ಮೇರೆಗೆ ತಹಸೀಲ್ದಾರ ನಾಗರಾಜ್ ನೇತೃತ್ವದಲ್ಲಿ ಹುಂಡಿ ತೆರೆಯಲಾಗಿದ್ದು, ಎಣಿಕೆ ಮಾಡಲಾಗಿದೆ. 2024ರ ಮಾ.27ರಿಂದ ಮೇ 21ರವರೆಗೆ ಒಟ್ಟು 56 ದಿನಗಳ ಅವಧಿಯಲ್ಲಿ ಒಟ್ಟು ₹30,21,253 ಸಂಗ್ರಹವಾಗಿದೆ.

ವಿದೇಶಿಗರ ಭಕ್ತಿ:

ಪ್ರತಿ ತಿಂಗಳು ಅಂಜನಾದ್ರಿಯ ಹುಂಡಿಯಲ್ಲಿ ವಿವಿಧ ರಾಷ್ಟ್ರಗಳ ಪ್ರವಾಸಿಗರು ಕಾಣಿಕೆ ಹಾಕುತ್ತಿದ್ದಾರೆ. ದೇಶ ವಿದೇಶದಿಂದ ಬರುತ್ತಿದ್ದ ಪ್ರವಾಸಿಗರು ಸಮೀಪದ ಹಂಪಿ, ಆನೆಗೊಂದಿ, ಪಂಪಾ ಸರೋವರ, ನವ ವೃಂದಾವನ, ದುರ್ಗಾ ಬೆಟ್ಟ ಸೇರಿದಂತೆ ವಿವಿಧ ಐತಿಹಾಸಿಕ ಪ್ರಸಿದ್ಧ ಸ್ಥಳ ವೀಕ್ಷಿಸಿ ಅಂಜನಾದ್ರಿಗೆ ಬರುತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ 20 ರಿಂದ 25 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ.

ಶಾಲಾ-ಕಾಲೇಜುಗಳ ರಜಾ ದಿನವಾಗಿದ್ದು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹುಂಡಿಯಲ್ಲಿ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಅಲ್ಲದೇ ಇಲ್ಲಿಯ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡಿರುವ ವಿದೇಶಿಯರೂ ಸಹ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಿದ್ದಾರೆ. ಇವರು ಸಹ ಅಂಜನಾದ್ರಿಗೆ ಆಗಮಿಸಿ ಆಂಜನೇಯಸ್ವಾಮಿ ದರ್ಶನ ಪಡೆಯುತ್ತಿದ್ದು, ತಮ್ಮ ದೇಶದ ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಗೆ ಹಾಕಿ ಭಕ್ತಿ ಸಮರ್ಪಿಸಿದ್ದಾರೆ. ಇದರಲ್ಲಿ ಪಾಕಿಸ್ತಾನ, ಮೊರಾಕೊ, ಯುಎಸ್ಎ, ಶ್ರೀಲಂಕಾ, ನೇಪಾಳ 5 ನಾಣ್ಯಗಳು ಸಂಗ್ರಹವಾಗಿವೆ.

ಈ ಸಂದರ್ಭ ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಮಹೇಶ್ ದಲಾಲ, ಹಾಲೇಶ ಗುಂಡಿ, ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ, ಇಂದಿರಾ, ಅನ್ನಪೂರ್ಣ , ಕವಿತಾ‌ ಕೆ., ಸುಧಾ, ಸೌಭಾಗ್ಯ, ಕವಿತಾ, ಸೈಯದ್ ಮುರ್ತುಜಾ, ಶ್ರೀರಾಮ ಜೋಶಿ, ಪವನ್ ಕುಮಾರ್ ನಿಲೋಗಲ್, ಬ್ಯಾಂಕ್ ಸಿಬ್ಬಂದಿ ಸುನಿಲ್ , ರಾಜಶೇಖರ್, ಶ್ರೀನಿವಾಸ್ ಹಾಗೂ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಭಾಗವಹಿಸಿದ್ದರು. ಕಳೆದ ಬಾರಿ ಮಾ. 27ರಂದು ಹುಂಡಿ ತೆರೆದಿದ್ದ ಸಂದರ್ಭದಲ್ಲಿ ₹9,29,147 ಸಂಗ್ರಹವಾಗಿತ್ತು.