ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರುನಾವು ತೆಗೆದುಕೊಳ್ಳುವಂತ ಆಹಾರ ಅಸುರಕ್ಷಿತ ಮತ್ತು ಗುಣಮಟ್ಟವಿಲ್ಲದ್ದಾಗಿದ್ದು, ಹಲವಾರು ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಟಿ. ನರಸೀಪುರ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಜಿ.ಎಸ್. ಸುಮಂತ್ ಹೇಳಿದರು.ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತೆ ತರಬೇತಿ ಹಾಗು ಪ್ರಮಾಣ ಪತ್ರ ಕೇಂದ್ರದ ಸಹಯೋಗದಲ್ಲಿ, ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇರಿದ್ದ ಎಲ್ಲಾ ಆಹಾರ ಉದ್ದಿಮೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.ಅಸುರಕ್ಷಿತ ಆಹಾರ ಪದ್ದತಿ, ಸ್ವಚ್ಚತೆ ಇಲ್ಲದೆ ಇರುವ ಪರಿಸರದಲ್ಲಿ ಆಹಾರ ಉತ್ಪಾದನೆ, ಕಲಬೆರಕೆ, ಅಸುರಕ್ಷಿತ ಪ್ಯಾಕಿಂಗ್, ಅತಾಂತ್ರಿಕವಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಇತ್ಯಾದಿ ಕಾರಣಗಳಿಂದ ನಾವು ತೆಗೆದುಕೊಳ್ಳುವಂತ ಆಹಾರ ಅಸುರಕ್ಷಿತವಾಗಿದೆ ಎಂದರು.ಸುರಕ್ಷಿತ ಆಹಾರ ಸೇವೆಗಳ ಗುಣಮಟ್ಟವನ್ನು ಬಲಪಡಿಸುವಂತ ನಿಟ್ಟಿನಲ್ಲಿ ಸರ್ಕಾರವು ಎಫ್.ಎಸ್.ಎಸ್.ಎಐ ಆಕ್ಟ್ ಜಾರಿಗೆ ತಂದಿದೆ. ಈ ಪ್ರಕಾರ ಫಾಸ್ಟಾಕ್, ಅಂದರೆ ಆಹಾರ ಉದ್ಯಮದಾರರಿಗೆ ವಿವಿಧ ಮಟ್ಟದಲ್ಲಿ ಸುರಕ್ಷಿತ ಆಹಾರ ಗುಣಮಟ್ಟ ಮತ್ತು ಸ್ವಚ್ಚತಾ ಕಾಳಜಿಯನ್ನು ಬೆಳಸಲು ಆಹಾರ ತಯಾರಿಸುವ ಜಾಗದಲ್ಲಿ ಮತ್ತು ಪ್ರತಿ ವ್ಯಾಪಾರ ಸ್ಥಳದಲ್ಲಿ ಕನಿಷ್ಟ ಒಬ್ಬರು ಕಡ್ಡಾಯವಾಗಿ ತರಬೇತಿ ಪಡೆದು, ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಟ್ಟಣದ ಎಲ್ಲ ಆಹಾರ ಉದ್ದಿಮೆದಾರರಿಗೆ ಇಂದು ತರಬೇತಿ ನೀಡಲಾಗುತ್ತಿದೆ ಅವರು ಎಂದು ತಿಳಿಸಿದರು. ಬೀದಿ ಬದಿ ಕ್ಯಾಂಟಿನ್ ಗಳು, ಹೋಟೆಲ್ ಗಳು, ಬೇಕರಿ ಮತ್ತು ಚಾಟ್ಸ್, ದಿನಸಿ ವ್ಯಾಪಾರಿಗಳು, ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳು, ಟೀಕಾಫಿ ಅಂಗಡಿ, ಅಡ್ವಾಸ್ ಕ್ಯಾಟರಿಂಗ್, ನೀರು ಆಧಾರಿತ ಪಾನೀಯ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಅಡುಗೆ ಎಣ್ಣೆ ತಯಾರಿಕರು, ಅಡುಗೆ ತಯಾರಕರು ಸರ್ಕಾರದ ಮಾರ್ಗಸೂಚಿಯಂತೆ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವಂತೆ ತಿಳಿಸಿದರು.ಆಹಾರ ಸುರಕ್ಷಿತ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ, ಮೈಸೂರು ಜಿಲ್ಲೆ ಆಹಾರ ಸುರಕ್ಷಿತ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ಮುಖ್ಯಸ್ಥೆ ರಶ್ಮಿ, ರಾಜಶೇಖರ್, ವಿದ್ಯಾ ಇದ್ದರು.