ಉತ್ತರ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಶತಮಾನಗಳಷ್ಟು ಹಳೆಯ ಹಸ್ತಪ್ರತಿಗಳು, ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ರಕ್ಷಿಸಿ, ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು.

ಕಾರವಾರ: ಜಿಲ್ಲೆಯಲ್ಲಿ ಲಭ್ಯವಿರುವ ಶತಮಾನಗಳಷ್ಟು ಹಳೆಯ ಹಸ್ತಪ್ರತಿಗಳು, ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ರಕ್ಷಿಸಿ, ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಾತತ್ವ ಇಲಾಖೆಯಿಂದ ರಾಜ್ಯದಲ್ಲಿನ ಹಳೆಯ ಹಸ್ತಪ್ರತಿಗಳು, ದಾಖಲೆ ಸಂಗ್ರಹಿಸುವ ಮೂಲಕ ನಮ್ಮ ಪ್ರಾಚೀನ ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ವೈಜ್ಞಾನಿಕವಾಗಿ ಡಿಜಿಟಲೈಸೇಷನ್ ಮಾಡುವ ಕಾರ್ಯ ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಪ್ರಸಿದ್ಧ ರಾಜ ಮನೆತನಗಳ ಉಗಮ, ಆಳ್ವಿಕೆ, ಧಾರ್ಮಿಕ ಪರಂಪರೆಗಳ ಆಚರಣೆಗಳನ್ನು ಒಳಗೊಂಡ ವೈಭವದ ಇತಿಹಾಸವಿದ್ದು, ಈ ಬಗ್ಗೆ ಹಸ್ತಪ್ರತಿಗಳಲ್ಲಿ ಹೆಚ್ಚಿನ ದಾಖಲೆಗಳ ಇರುವ ಸಾಧ್ಯತೆಗಳಿದ್ದು, ಇಂತಹ ದಾಖಲೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವಂತೆ ತಿಳಿಸಿದರು.

ಹಸ್ತಪ್ರತಿಗಳ ಬಗ್ಗೆ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಅಧ್ಯಾಪಕರಿಗೆ ಮಾಹಿತಿ ಇದ್ದಲ್ಲಿ ಅವುಗಳನ್ನು ಸಂಗ್ರಹಿಸುವಂತೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಅವರ ಮನೆಗಳಲ್ಲಿ ಇಂತಹ ಹಸ್ತಪ್ರತಿಗಳು ಇದ್ದಲ್ಲಿ ಮಾಹಿತಿ ನೀಡುವಂತೆ ತಿಳಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಪುರಾತನ ಹಸ್ತಪ್ರತಿಗಳು ದೊರೆಯುವ ಸಾಧ್ಯತೆಯಿರುವ ಐತಿಹಾಸಿಕ ಪ್ರದೇಶಗಳು, ಧಾರ್ಮಿಕ ಸ್ಥಳಗಳು ಮತ್ತು ಬಸದಿಗಳಿಗೆ, ಮುಜರಾಯಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಗ್ರಂಥಾಲಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು.ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪುರಾತನ ಹಸ್ತಪ್ರತಿಗಳಿದ್ದಲ್ಲಿ ಅವುಗಳ ಕುರಿತು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ ಅವರು, ಸಾರ್ವಜನಿಕರು ನೀಡುವ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳಿಗೆ ಯಾವುದೇ ಹಾನಿಯಾಗದಂತೆ ಡಿಜಿಟಲೈಸ್ ಮಾಡಿ ಪುನಃ ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗುವುದು ಎಂದರು. ಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದ ಸ್ವರ್ಣವಲ್ಲಿ ಮಠದ ಡಾ. ಕೃಷ್ಣ ಜೋಷಿ ಮತ್ತು ಗೋಕರ್ಣ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು ತಮ್ಮ ಮಠಗಳು ಮತ್ತು ಕಾಲೇಜು ವ್ಯಾಪ್ತಿಯಲ್ಲಿಯೂ ಪುರಾತನ ತಾಳೆಗರಿಯ ಹಸ್ತಪ್ರತಿಗಳಿದ್ದು, ಇವುಗಳನ್ನು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬಹುದು ಎಂದರು. ಸಭೆಯಲ್ಲಿ ವರ್ಚುವಲ್ ಮೂಲಕ ಬೆಂಗಳೂರಿನ ಪುರಾತತ್ವ ಇಲಾಖೆಯ ನಿರ್ದೇಶಕಿ ಸ್ಮಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ಎಸ್. ತಳವಾರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ ಮತ್ತಿತರರು ಇದ್ದರು.