ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡಲು ಹಾಗೂ ಸಾಲ ವಸೂಲಾತಿ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಸಾಲಗಾರರಿಗೆ ತೊಂದರೆ ನೀಡದೆ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಕ್ರೋ ಫೈನಾನ್ಸ್ ಹಾವಳಿ ಹಾಗೂ ಕರ್ನಾಟಕ ರಾಜ್ಯದ ದೂಷಿತ ಹಣಕಾಸು ಸಂಸ್ಥೆಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳು ಯಾವುದೇ ಅಡಮಾನ ಇಟ್ಟುಕೊಳ್ಳದೆ ವಾರ್ಷಿಕ ವರಮಾನ ನೋಡಿ ಸಾಲ ನೀಡಬೇಕು. ಸಾಲಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕಂತು ಪಾವತಿಗೆ ಸಮಯಾವಕಾಶ ನೀಡಬೇಕು ಎಂದರು.ಸಾಲ ನೀಡುವ ಸಂದರ್ಭದಲ್ಲಿಯೇ ಎಲ್ಲವನ್ನೂ ವಿವರಿಸಿ ತಿಳಿಸಬೇಕು ಎಂದರಲ್ಲದೆ, ಕೇವಲ ದುಡ್ಡು ಮಾಡುವ ಉದ್ದೇಶದಿಂದ ಸಾಲ ನೀಡಬೇಡಿ, ಸಾಲ ಪಡೆದವರು ಜೀವನದಲ್ಲಿ ಸುಧಾರಣೆ ಆಗುವುದಕ್ಕೂ ಅವಕಾಶ ನೀಡಿ ಎಂದ ಅವರು ಸಾಲದ ಸುಳಿಯಿಂದ ಜನರು ಹೊರಬರದಂತೆ ಸಿಲುಕಿಸುತ್ತೀರ ಎಂದರು.
ಸಾಲ ವಸೂಲಾತಿಗಾಗಿ ಸಾಲಗಾರರನ್ನು ಸಾರ್ವಜನಿಕವಾಗಿ ನಿಂದಿಸುವುದು, ಬೆದರಿಕೆ ಹಾಕಿವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.೨೦೨೦ರಲ್ಲಿ ಒಂದು ಲಕ್ಷ ಸಾಲ ಪಡೆದು ಇದುವರೆಗೆ ಎರಡು ಲಕ್ಷ ರುಪಾಯಿ ಪಾವತಿಸಿದ್ದರೂ ಸಾಲ ತೀರಿಲ್ಲ ಎನ್ನುವುದಾದರೆ ಅವರು ಏಕೆ ಹಣ ಪಾವತಿ ಮಾಡಬೇಕು ಎಂದು ಪ್ರಶ್ನಿಸಿದ ಅವರು ಆರ್.ಬಿ.ಐ. ಮಾರ್ಗಸೂಚಿಯಂತೆ ಆಡಿಟ್ ಮಾಡಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾಲ ವಸೂಲಾತಿ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ನೀಡುವುದು, ಸಾಲಗಾರರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಲು ಮಾನಸಿಕ ಹಿಂಸೆ ನೀಡದಂತೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಲಾಗುವುದು ಎಂದು ತಿಳಿಸಿದರು. ಮೈಕ್ರೋ ಫೈನಾನ್ಸ್‌ಗಳು ಕಾನೂನುಬದ್ಧವಾಗಿ ಜವಾಬ್ದಾರಿಯುತವಾಗಿ ನಡೆಸುವುದರ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸುವುದರ ಮೂಲಕ ನಂಬಿಕೆ ಬೆಳೆಸಿಕೊಳ್ಳಿ ಎಂದು ತಿಳಿಸಿದರು.ಲೀಡ್ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರಲ್ಲದೆ, ಸಹಕಾರ ಇಲಾಖೆಯಲ್ಲಿ ನೊಂದಣಿಯಾಗಿರುವ ಹಣಕಾಸು ಸಂಸ್ಥೆಗಳು ಕಾನೂನು ಬದ್ದವಾಗಿ ನಿರ್ವಹಿಸುತ್ತಿದ್ದಾರಾ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಹಕಾರ ಇಲಾಖೆಯ ಉಪನಿಬಂಧಕರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿ?ಧಿಕಾರಿ ಮೊಹಮ್ಮದ್ ಸುಜೀತ ಅವರು ಮಾತನಾಡಿ, ಸಾಲ ನೀಡುವ ಸಂದರ್ಭದಲ್ಲಿಯೇ ಹಣ ಕಟ್ಟಲು ಶಕ್ತರಿದ್ದಾರೆ ಎಂದು ಪರಿಶೀಲನೆ ಮಾಡಿ ಸಾಲ ನೀಡಬೇಕು, ಅದನ್ನು ಮೀರಿ ಸಾಲ ನೀಡಿ ವಸೂಲಾತಿಗೆ ಜನರಿಗೆ ತೊಂದರೆ ನೀಡುವುದು ಕಂಡುಬಂದರೆ ಪ್ರಕರಣ ದಾಖಲಿಸುವುದಾಗಿ ಸೂಚನೆ ನೀಡಿದರುಸಾಲ ವಸೂಲಾತಿಗೆ ಮೊದಲು ಆರ್.ಬಿ.ಐ.ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಸಾಲ ವಸೂಲಾತಿಗೆ ಬೆಳಗ್ಗೆ ೯ರಿಂದ ಸಂಜೆ ೬ ಗಂಟೆಗೆವರೆಗೆ ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಮನೆ ಒಳಗೆ ಹೊಗುವಂತಿಲ್ಲ, ಸಾಲಗಾರರನ್ನು ಸಾರ್ವಜನಿಕವಾಗಿ ಹಿಯಾಳಿಸಿ ಮಾತನಾಡುವಂತಿಲ್ಲ, ಸಾಲ ವಸೂಲಾತಿಗೆ ಅಡ್ಡದಾರಿ ಹಿಡಿದಿರುವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ಅವರು ಆರ್.ಬಿ.ಐ ಮಾರ್ಗಸೂಚಿಗಳನ್ನು ವಿವರಿಸಿದರು. ಸಾಲಗಾರರು ಕಂತು ಕಟ್ಟಲು ಸಾಧ್ಯವಿಲ್ಲ. ಆರ್ಥಿಕ ಸ್ಥಿತಿ ತೊಂದರೆ ಇದ್ದರೆ ಅವಕಾಶ ನೀಡಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸಹಕಾರ ಇಲಾಖೆ ಉಪ ನಿಬಂದಕರಾದ ಕಿರಣ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ, ವಿವಿಧ ಮೈಕ್ರೋ ಫೈನಾನ್ಸ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.