ಶ್ರೀಮಂತರ ಸಾಲಗಳ ಮೊದಲು ವಸೂಲು ಮುಖ್ಯ: ಶಾಂತನಗೌಡ

| Published : Nov 16 2024, 12:39 AM IST

ಸಾರಾಂಶ

ಮಾಜಿ ಪ್ರಧಾನಿ ಜವಾಹರಲಾಲ್ ನೇಹರೂ ಜನ್ಮ ದಿನಾಚರಣೆ ಅಂಗವಾಗಿ ನ.14ರಿಂದ ನ.20ರವರೆಗೆ ದೇಶದಲ್ಲಿ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಗೊಲ್ಲರಹಳ್ಳಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾಜಿ ಪ್ರಧಾನಿ ಜವಾಹರಲಾಲ್ ನೇಹರೂ ಜನ್ಮ ದಿನಾಚರಣೆ ಅಂಗವಾಗಿ ನ.14ರಿಂದ ನ.20ರವರೆಗೆ ದೇಶದಲ್ಲಿ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕಿನ ಗೊಲ್ಲರಹಳ್ಳಿ ಬಳಿಯ ತರಳುಬಾಳು ಸಮುದಾಯ ಭವನದಲ್ಲಿ ಶುಕ್ರವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆಯಲ್ಲಿ ಹಾಲು ಉತ್ಪಾದನೆ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹಾಲು ಒಕ್ಕೂಟದಲ್ಲಿ ವಿಶ್ವದಲ್ಲಿಯೇ ಗುಜರಾತ್ ರಾಜ್ಯ ಹೆಚ್ಚು ಪ್ರಗತಿ ಸಾಧಿಸಿ, ಪ್ರಥಮ ಸ್ಥಾನದಲ್ಲಿದ್ದರೆ ಕರ್ನಾಟಕ ರಾಜ್ಯದ ನಂದಿನಿ ಹಾಲು ಒಕ್ಕೂಟ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಹಾಲನ್ನು ಉತ್ತಮವಾಗಿ ಸಂಸ್ಕರಿಸಲಾಗುತ್ತಿದೆ. ನಂದಿನ ಹಾಲು ಯಾವತ್ತೂ ಕೆಟ್ಟುಹೋಗಿರುವ ಉದಾಹರಣೆ ಇಲ್ಲ. ನಂದಿನ ಹಾಲಿನ ಉತ್ಪನ್ನಗಳಿಂದ ಹೆಚ್ಚು ಲಾಭ ಗಳಿಸಲಾಗುತ್ತಿದೆ ಎಂದು ಹೇಳಿದರು.

ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಸಹಕಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಸಂಘಗಳು ನೌಕರಿಯಲ್ಲಿದ್ದವರ ಹಾಗೂ ಶ್ರೀಮಂತರ ಸಾಲಗಳನ್ನು ಮೊದಲು ವಸೂಲು ಮಾಡಬೇಕು. ಅನಂತರ ರೈತರ ಸಾಲ ವಸೂಲು ಮಾಡುವಂತೆ ಸಲಹೆ ನೀಡಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ನಂಜುಂಡೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ ಹನುಮನಹಳ್ಳಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಚ್.ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಂಎಫ್‌ಸಿ ಕಾಲೇಜು ಪ್ರಾಂಶುಪಾಲ ಪ್ರವೀಣ್‍ ದೊಡ್ಡಗೌಡ ಉಪನ್ಯಾಸ ನೀಡಿದರು. ಶಿಮುಲ್ ಉಪಾಧ್ಯಕ್ಷ ಚೇತನ್ ನಾಡಿಗೇರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಎಸ್.ಸುರೇಂದ್ರ ಗೌಡ, ಎಚ್.ಕೆ.ಬಸಪ್ಪ, ಶಿಮುಲ್ ನಿರ್ದೇಶಕ ಜಗದೀಶಪ್ಪ ಬಣಕಾರ್, ತಾಲೂಕು ಹಾಗೂ ಪಟ್ಟಣದ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿ, ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ರುದ್ರೇಶ್ ನಿರೂಪಿಸಿದರು.

- - - -15ಎಚ್.ಎಲ್.ಐ1:

ಸಹಕಾರ ಸಪ್ತಾಹ ಸಮಾರಂಭವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.