.ದೇಗುಲ ಬಳಿ ಕೊಳಚೆ ನೀರು ಸಂಗ್ರಹ

| Published : Jul 02 2024, 01:33 AM IST

ಸಾರಾಂಶ

ಈ ಮೊದಲು ಮಳೆ ನೀರು ಕೆರೆಗೆ ಹರಿಯಲು ಕಾಲುವೆ ಇತ್ತು. ಆದರೆ ಮಾರ್ಗ ಬದಲಿಸಿ ನೀರು ಪೈಪ್‌ಲೈನ್‌ ಮೂಲಕ ಹರಿಯುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ. ಈ ಪೈಪ್‌ ಮಣ್ಣಿನಲ್ಲಿ ಮುಚ್ಚಿದೆ. ಇದರಿಂದಾಗಿ ನೀರು ನಿಂತು ಪಾಚಿ ಕಟ್ಟಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ಆನೂರು ಗ್ರಾಪಂ ವ್ಯಾಪ್ತಿಯ ದೊಡ್ಡಬೊಮ್ಮನಹಳ್ಳಿಯ ವೀರಭದ್ರೇಶ್ವರ ದೇವಾಲಯ ಬಳಿ ನೀರು ಸಂಗ್ರಹವಾಗಿ ಪಾಚಿಕಟ್ಟಿ ದುರ್ವಾಸನೆ ಬೀರುತ್ತಿದ್ದು ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಡೆಂಘೀ ಸೇರಿದಂತೆ ಮತ್ತಿತರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.

ದೊಡ್ಡಬೊಮ್ಮನಹಳ್ಳಿ ಗ್ರಾಮವು ಚಿಂತಾಮಣಿ-ಶ್ರೀನಿವಾಸಪುರ ತಾಲೂಕಿನ ಗಡಿ ಭಾಗದಲ್ಲಿದ್ದರೂ ಇಲ್ಲಿ ಪ್ರತೀ ಶನಿವಾರ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಒಂದೆಡೆ ಸೇರುವ ಕೇಂದ್ರವಾಗಿದ್ದು, ನಾಲ್ಕೈದು ಹೋಟೆಲ್, ಸರ್ಕಾರಿ ಪ್ರೌಢಶಾಲೆ, ವಿದ್ಯಾರ್ಥಿ ನಿಲಯವಿದೆ, ಇಲ್ಲಿನ ಶ್ರೀ ವೀರಭದ್ರಸ್ವಾಮಿ ದೇವಸ್ಥಾನವು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ದೇವಸ್ಥಾನವಾಗಿದ್ದು ರಾಜ್ಯದ ನಾನಾ ಕಡೆಗಳಿಂದ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ.

ಅವೈಜ್ಞಾನಿಕ ಕಾಮಗಾರಿ

ಈ ಮೊದಲು ಮಳೆ ನೀರು ಕೆರೆಗೆ ಹರಿಯಲು ಕಾಲುವೆ ಇತ್ತು. ಆದರೆ ಮಾರ್ಗ ಬದಲಿಸಿ ನೀರು ಪೈಪ್‌ಲೈನ್‌ನಲ್ಲಿ ಗ್ರಾಮದ ಮೂಲಕ ಹರಿಯುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ. ಈ ಪೈಪ್‌ ಮಣ್ಣಿನಲ್ಲಿ ಮುಚ್ಚಿದೆ. ಇದರಿಂದಾಗಿ ನೀರು ಸರಾಗವಾಗಿ ಸಾಗದೆ ದೇವಸ್ಥಾನದ ಪಕ್ಕದಲ್ಲಿಯೇ ನಿಂತು ಪಾಚಿ ಕಟ್ಟಿದೆ. ನೀರು ನಿಂತಿರುವುದರಿಂದ ಅಕ್ಕ ಪಕ್ಕದಲ್ಲಿರುವ ಕೆಲವು ಮನೆಯ ಅಡಿಪಾಯಕ್ಕೂ ನೀರು ಹೋಗುತ್ತಿದ್ದು ತೊಂದೆಯಾಗುತ್ತಿದೆಯೆಂದು ಮನೆ ಮಾಲೀಕರು ದೂರಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳಲಿ

ದೇವಸ್ಥಾನದ ಪಕ್ಕದಲ್ಲಿ ನೀರು ನಿಂತು ದೊಡ್ಡ ಕುಂಟೆಯಂತಾಗಿದ್ದು ನೀರು ಪಾಚಿ ಕಟ್ಟಿ ಹಸಿರು ಬಣ್ಣಕ್ಕೆ ತಿರುಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯಾಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪಂಚಾಯತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಡೆಂಘೀ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.