ಸಮಷ್ಟಿ ಪ್ರಜ್ಞೆ ಹೊಂದಿದ ಉತ್ತರ ಕರ್ನಾಟಕ

| Published : Oct 17 2024, 12:01 AM IST

ಸಾರಾಂಶ

ಕರ್ನಾಟಕ ಗತವೈಭವವನ್ನು ಮುದ್ರಣ ವ್ಯವಸ್ಥೆ ಮೂಲಕ ಕಟ್ಟಿಕೊಡುವ ಕೆಲಸ 12ನೇ ಶತಮಾನದಲ್ಲಿ ಆಯಿತು. 15ನೇ ಶತಮಾನದಲ್ಲಿ ಶೂನ್ಯ ಸಂಪಾದನೆಯ ಕಾಲಘಟ್ಟ ಪ್ರಮುಖವಾಗಿ ಗತವೈಭವವನ್ನು ಮರು ಅನುವಾದಿಸುವ ಕಾರ್ಯ ಮಾಡಿತು.

ಧಾರವಾಡ:

ಮೈಸೂರು ಭಾಗದಲ್ಲಿ ರಾಜಾಶ್ರಯ ಇತ್ತು. ಆದರೆ, ಉತ್ತರ ಭಾಗದಲ್ಲಿ ಅಂಥ ಆಶ್ರಯ ಇಲ್ಲದ್ದರಿಂದ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಯಿತು. ಮೈಸೂರಿಗೆ ಹೋದರೆ ಎಲ್ಲ ಸಂಸ್ಥೆಗಳೂ ಮಹಾರಾಜರ ಹೆಸರುಗಳಲ್ಲಿ ಇದ್ದರೆ, ಇಲ್ಲಿ ಸಮಷ್ಟಿ ಪ್ರಜ್ಞೆಯೊಂದಿಗೆ ಕರ್ನಾಟಕ ಹೆಸರನ್ನು ಹೋಟೆಲ್‌ನಿಂದ ಹಿಡಿದುಕೊಂಡು ವಿಶ್ವವಿದ್ಯಾಲಯ ವರೆಗೆ ಇಟ್ಟುಕೊಳ್ಳಲಾಗಿದೆ ಎಂದು ತುಮಕೂರ ವಿವಿ ಪ್ರಾಧ್ಯಾಪಕ ಡಾ. ಎನ್.ಎಸ್. ಗುಂಡೂರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಎಮೆರಿಟಸ್ ಪ್ರೊಫೆಸರ್ ಸಿ.ಆರ್. ಯರವಿನತೆಲಿಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಶೂನ್ಯ ಸಂಪಾದನೆಯ ಅನುವಾದ - ಸಾಮಾಜಿಕ ಇತಿಹಾಸದ ಒಳನೋಟಗಳು’ ವಿಷಯದ ಕುರಿತು ಮಾತನಾಡಿದರು.

ಹೊಸ ರಾಜ್ಯ ನಿರ್ಮಿಸಬೇಕಾದರೆ ಇತಿಹಾಸ ಬಹಳ ಮುಖ್ಯವಾಗುತ್ತದೆ. ಕರ್ನಾಟಕ ಗತವೈಭವದ ಭಾಗವಾಗಿ ಸಾಹಿತ್ಯ ಚರಿತ್ರೆಗಳ ಜತೆಗೆ ನಮ್ಮ ಚರಿತ್ರೆಗಳು ಬಂದವು. ಕರ್ನಾಟಕ ಗತವೈಭವವನ್ನು ಮುದ್ರಣ ವ್ಯವಸ್ಥೆ ಮೂಲಕ ಕಟ್ಟಿಕೊಡುವ ಕೆಲಸ 12ನೇ ಶತಮಾನದಲ್ಲಿ ಆಯಿತು. 15ನೇ ಶತಮಾನದಲ್ಲಿ ಶೂನ್ಯ ಸಂಪಾದನೆಯ ಕಾಲಘಟ್ಟ ಪ್ರಮುಖವಾಗಿ ಗತವೈಭವವನ್ನು ಮರು ಅನುವಾದಿಸುವ ಕಾರ್ಯ ಮಾಡಿತು ಎಂದರು.

ಅನುವಾದ ಎಂಬ ಕೆಲಸಕ್ಕೆ ಒಂದು ಸಾಮಾಜಿಕ ಹಿನ್ನೆಲೆ ಇದೆ. ಎಲ್ಲರೂ ಸೇರುವುದಕ್ಕೆ ಸಾಮಾಜಿಕತೆ ಎನ್ನುತ್ತೇವೆ. ಇದು ಕುಲ ನಿರ್ಮಾಣವೂ ಆಗಿರುತ್ತದೆ ಎಂದ ಅವರು, ಏಕೀಕರಣ ಎನ್ನುವುದು ಬರೀ ರಾಜಕೀಯ ಯೋಜನೆಯಾಗಿರಲಿಲ್ಲ. ಅದೊಂದು ಸಾಂಸ್ಕೃತಿಕ ಯೋಜನೆಯೂ ಆಗಿತ್ತು. ಕನ್ನಡ ಕಟ್ಟಬೇಕಾದರೆ ಕನ್ನಡ ಸಂಸ್ಕೃತಿ ಕಟ್ಟಬೇಕು. ಹಾಗಾಗಿ ಆಧುನಿಕ ಕನ್ನಡ ಸಾಹಿತ್ಯ ಕರ್ನಾಟಕ ನಿರ್ಮಾಣದಲ್ಲಿ ಭಾಗಿಯಾಗಿತ್ತು. ಅದಕ್ಕಾಗಿ ಕರ್ನಾಟಕ ರಾಜ್ಯ ಅನ್ನುವುದು ಬರೀ ರಾಜಕೀಯ ಯೋಜನೆಯಲ್ಲ, ಸಾಹಿತ್ಯಿಕ ಯೋಜನೆಯೂ ಕೂಡಾ ಆಗಿರುತ್ತದೆ ಎಂದರು.

ಸಾಹಿತ್ಯ ಬೇರೆಯಲ್ಲ, ರಾಜಕೀಯ ಬೇರೆಯಲ್ಲ. ರಾಜಕೀಯ ಸ್ವರೂಪ ಕವಿರಾಜ ಮಾರ್ಗದಲ್ಲಿ ಬೇರೆ ಇದೆ. ಶೂನ್ಯ ಸಂಪಾದನೆ ಕಾಲಕ್ಕೆ ಬೇರೆ ಇದೆ. ಆಧುನಿಕ ಕಾಲದಲ್ಲಿ ಅದು ಬೇರೆಯ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕಾರಣವಾದಂತೆ ಸಾಹಿತ್ಯ ಮತ್ತು ರಾಜಕೀಯ ಒಳಸುಳಿವು ಒಂದೇ ಆಗಿರುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ ಡಾ. ಎಸ್.ಆರ್. ರಾಮನಗೌಡರ, ಮನುಷ್ಯ ಶೂನ್ಯದಿಂದ ಬಂದು, ಶೂನ್ಯದಲ್ಲಿ ಐಕ್ಯನಾಗುತ್ತಾನೆ. ಅಲ್ಲಮಪ್ರಭು ಅಪಾರ ಜ್ಞಾನದ ಮನುಷ್ಯ. ಜ್ಞಾನಿಗಳನ್ನು ಸಂದರ್ಶಿಸುತ್ತಾ ಹೋದರು ಒಬ್ಬ ಜ್ಞಾನೀಯ ಅಂತರಂಗ ಇನ್ನೊಬ್ಬ ಜ್ಞಾನಿಗೆ ಗೊತ್ತಾಗುತ್ತದೆ. ಅಲ್ಲಮಪ್ರಭು ಸ್ಪುರದ್ರುಪಿಯಾಗಿದ್ದಷ್ಟೆ ಅಂತರಂಗ ಜ್ಞಾನದ ಪರಾಕಾಷ್ಠೆ ಹೊಂದಿದ್ದರು ಎಂದರು.

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರ್ವಹಿಸಿದರು ಶಶಿಧರ ತೋಡಕರ ವಂದಿಸಿದರು. ಅಕ್ಕಮ್ಮ ಗುಂಡೂರ ಇದ್ದರು.