ಗೆದ್ದು ಬನ್ನಿ : ಯುದ್ದಕ್ಕೆ ಹೊರಟ ಯೋಧರಿಗ ಬೀಳ್ಕೊಡುಗೆ

| N/A | Published : May 12 2025, 12:33 AM IST / Updated: May 12 2025, 07:40 AM IST

ಸಾರಾಂಶ

ಭಾರತ-ಪಾಕ್‌ ಯುದ್ಧದ ಹಿನ್ನೆಲೆಯಲ್ಲಿ ಸೇನೆಯಿಂದ ತುರ್ತು ಕರೆ ಬಂದಿರುವ ಕಾರಣ ರಜೆ ಮೇಲೆ ಊರಿಗೆ ಬಂದಿದ್ದ ರಾಜ್ಯದ ಮತ್ತಷ್ಟು ಸೈನಿಕರು ಮರಳಿ ಕರ್ತವ್ಯಕ್ಕೆ ತೆರಳಿದ್ದಾರೆ.

 ಬೆಂಗಳೂರು : ಭಾರತ-ಪಾಕ್‌ ಯುದ್ಧದ ಹಿನ್ನೆಲೆಯಲ್ಲಿ ಸೇನೆಯಿಂದ ತುರ್ತು ಕರೆ ಬಂದಿರುವ ಕಾರಣ ರಜೆ ಮೇಲೆ ಊರಿಗೆ ಬಂದಿದ್ದ ರಾಜ್ಯದ ಮತ್ತಷ್ಟು ಸೈನಿಕರು ಮರಳಿ ಕರ್ತವ್ಯಕ್ಕೆ ತೆರಳಿದ್ದಾರೆ.

ಮಂಡ್ಯ, ಚಿಕ್ಕಮಗಳೂರು, ಬೀದರ್‌, ಕಲಬುರಗಿ, ಹಾವೇರಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರಜೆಗೆಂದು ಬಂದಿದ್ದ ಸೈನಿಕರು ಮರಳಿ ಸಮರಕ್ಕೆ ವಾಪಸ್‌ ಹೋಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳೂರ ತಾಂಡಾದ ಯೋಧ ಉಮೇಶ್ ಹೇಮು ರಾಥೋಡ್ ಏ.25ರಂದು ತಮ್ಮ ಮದುವೆಗೆಂದು ರಜೆ ಪಡೆದು ಬಂದಿದ್ದರು. ಈಗ ಕರ್ತವ್ಯ ಕರೆಯ ಮೇರೆಗೆ ರಣರಂಗಕ್ಕೆ ಮರಳಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸಿಗದಾಳು ಅದ್ದಡದ ಆದರ್ಶ್ ಎಸ್.ಎಸ್ ಸಿಗದಾಳು 1 ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದರು. ಈಗ ತಮ್ಮ ರಜೆಯನ್ನು 12 ದಿನಕ್ಕೆ ಮೊಟಕುಗೊಳಿಸಿದ್ದಾರೆ.

ಮಂಡ್ಯ ತಾಲೂಕಿನ ರಾಘವೇಂದ್ರ ಅವರು ಗೃಹ ಪ್ರವೇಶದ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದರು. ರಕ್ಷಣಾ ಇಲಾಖೆ ಸೈನ್ಯಾಧಿಕಾರಿಗಳ ತುರ್ತು ಕರೆ ಮೇರೆಗೆ ಮತ್ತೆ ಕರ್ತವ್ಯಕ್ಕೆ ತೆರಳಿದರು. ಅವರನ್ನು ನಿವಾಸಿಗಳು ಅಭಿನಂದಿಸಿ, ಶುಭ ಹಾರೈಸಿ ಕಳುಹಿಸಿಕೊಟ್ಟರು.

ಹಾವೇರಿ ಜಿಲ್ಲೆಯ ಆನಂದ ಷಣ್ಮುಖಪ್ಪ ಬಿಳಚಿ ಅವರು ಮದುವೆಗಾಗಿ ರೆಜೆ ಪಡೆದು ಊರಿಗೆ ಆಗಮಿಸಿದ್ದರು. ತುರ್ತು ಕರೆ ಬಂದಿದ್ದರಿಂದ ವಿವಾಹವಾಗಿ 10ನೇ ದಿನಕ್ಕೇ ಕರ್ತವ್ಯಕ್ಕೆ ಹಾಜರಾಗಲು ಲಖನೌಗೆ ಪ್ರಯಾಣ ಬೆಳೆಸಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪೂರ ಗ್ರಾಮದ ಬಸವಕಿರಣ ಬಿರಾದಾರ (21) ಎಂಬುವರು ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಏ.27ರಂದು ಸಹೋದರಿಯ ಮದುವೆಗೆಗಾಗಿ ಆಗಮಿಸಿದ್ದರು. ಯುದ್ಧದ ಹಿನ್ನಲೆ, ರಜಾ ಅವಧಿ ಮುಗಿಯುವ ಮುನ್ನವೇ ಕರ್ತ್ಯವ್ಯಕ್ಕೆ ಮರಳಿದ್ದಾರೆ. ಸೈನಿಕನಿಗೆ ಸಹೋದರಿ ಆರತಿ ಬೆಳಗಿ ತಿಲಕವಿಟ್ಟು ಶತ್ರು ಸಂಹಾರ ಮಾಡಲು ತಾಯಿ ಚಾಮುಂಡೇಶ್ವರಿ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ ಬೀಳ್ಕೊಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದುತ್ತರಗಾಂವ್ ನಿವಾಸಿ ಹಣಮಂತರಾಯ ಅವಸೆ ಕಳೆದ 20 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪತ್ನಿಯ ಹೆರಿಗೆ ಆದ ಹಿನ್ನಲೆಯಲ್ಲಿ 1 ತಿಂಗಳ ರಜೆಯ ಮೇಲೆ ತವರಿಗೆ ಬಂದಿದ್ದರು. ವಾರದ ಹಿಂದಷ್ಟೇ ಅವರಿಗೆ ಗಂಡು ಮಗು ಜನಿಸಿದೆ. ಯುದ್ಧದ ಹಿನ್ನೆಲೆಯಲ್ಲಿ ಕರೆ ಬಂದಿದ್ದರಿಂದ ಕುಟುಂಬಕ್ಕಿಂತ ದೇಶ ಮುಖ್ಯ ಎಂದು ಸಮರಕ್ಕೆ ಮರಳಿದ್ದಾರೆ.