ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ರಾತ್ರೋರಾತ್ರಿ ಇಲಾಖೆಯ ಮುಖ್ಯ ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹಾಸ್ಟೆಲ್‌ನ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.ನಗರದ ಆಕಾಶವಾಣಿ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ಸಮೀಪ ಇರುವ ಹಾಸ್ಟಲ್‌ಗೆ ಶನಿವಾರ ರಾತ್ರಿ ಇಲಾಖೆಯ ಮುಖ್ಯ ಆಯುಕ್ತರಾದ ಕೆ. ಶ್ರೀನಿವಾಸ್ ಹಾಗೂ ತಂಡ ದಿಢೀರ್ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕಗೊಂಡರು. ಕೊಠಡಿ, ಊಟದ ಕೊಠಡಿ, ಮಲಗುವ ಕೊಠಡಿ ಹಾಗೂ ಶೌಚಾಲಯ ಇತರೆ ಕಡೆ ಖುದ್ದಾಗಿ ಹೋಗಿ ಪರಿಶೀಲಿಸಿದರು. ವೈದ್ಯಕೀಯ, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ವೆಟರ್ನರಿ, ಮೆಕಾನಿಕಲ್ ಶಿಕ್ಷಣ ಪಡೆಯುತ್ತಿರುವವರು ಇಲ್ಲಿದ್ದೀರಾ! ಓದುವುದಕ್ಕೆ ಬಂದಿದ್ದೀರಾ ಇಲ್ಲ ಮಜಾ ಮಾಡುವುದಕ್ಕೆ ಬಂದಿದ್ದೀರಾ. ಓದುವ ವೇಳೆ ಇವೆಲ್ಲಾ ಬೇಕಾ! ನಿಮ್ಮ ಅಪ್ಪ, ಅಮ್ಮ ಇದಕ್ಕೆ ಓದಲು ಕಳುಹಿಸಿದ್ದಾರೆ. ತಂದೆ, ತಾಯಿ ಕಷ್ಟಪಟ್ಟು ಓದಿಸುತ್ತಾರೆ. ಅವರ ಹೆಸರು ಉಳಿಸಬೇಕು ಎಂದು ವಿದ್ಯಾರ್ಥಿಗೆ ತರಾಟೆಗೆ ತೆಗೆದುಕೊಂಡರು.
ಈ ಹಾಸ್ಟೆಲ್‌ನ ಅಡುಗೆ ಮಾಡುವವರು ಬೆಳಿಗ್ಗೆ ಇರುವವರು ಸಂಜೆ ಇರುವುದಿಲ್ಲ. ಬೇರೆಯವರು ಬಂದು ಅಡುಗೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ಒಬ್ಬರಿಗೆ ಅರ್ಧ ಸಂಬಳ ಕೊಡುತ್ತಾರಾ ಎಂದು ಆಯುಕ್ತರು ಇಲಾಖೆ ಅಧಿಕಾರಿ ಕುಮಾರ್ ಹಾಗೂ ಇತರರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಲಾಖೆ ಅಧಿಕಾರಿ, ಈ ಹಾಸ್ಟೆಲ್‌ನಲ್ಲಿ ೧೬೫ ವಿದ್ಯಾರ್ಥಿಗಳು ಇದ್ದು, ಚಿಕನ್ ಎಷ್ಟು ಕೇಜಿ ತರುತ್ತಾರೆ, ಬಬ್ಬರಿಗೆ ಎಷ್ಟು ಚಿಕನ್ ಕೊಡುತ್ತೀರಾ ಎಂದು ಅಡುಗೆ ಮಾಡುವ ಮಹಿಳೆಯರಿಗೆ ಪ್ರಶ್ನೆ ಮಾಡಿದರು. ಆಗ ತಡವರಿಸುತ್ತಾ ೨೦ ಕೆ.ಜಿ ಎಂದು ಹೇಳಿದರು. ಆಯುಕ್ತರು ಮಾತನಾಡಿ, ಅವರೇ ವಾಸಿ ೧೫ ಕೆಜಿ ಎಂದಿದ್ದಾರೆ. ಚಿಕನ್ ತಂದ ಮೇಲೆ ಹಾಸ್ಟೆಲ್‌ನಲ್ಲಿ ತೂಕ ಮಾಡಬೇಕು. ಇವೆಲ್ಲಾ ವ್ಯವಸ್ಥೆ ಇಲ್ಲವೇ ಎಂದು ಪ್ರಶ್ನಿಸಿದರು.ಇಷ್ಟು ಹುಡುಗರಿಗೆ ಎಷ್ಟು ಇಡ್ಲಿ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ೪೦೦ ಇಡ್ಲಿ ಎಂದರು. ಒಬ್ಬರಿಗೆ ೪ ಇಡ್ಲಿ ಹಾಕುತ್ತಾರೆ. ಹಾಗಾದ್ರೆ ೧೬೫ ಜನರಿಗೆ ೬೬೦ ಇಡ್ಲಿ ಬೇಕಾಗುತ್ತದೆ. ಇದರಲ್ಲಿ ಯಾರು ಸತ್ಯಹರಿಶ್ಚಂದ್ರ ಗೊತ್ತಾಗುತ್ತಿಲ್ಲ. ಇನ್ನು ೪೦೦ ಇಡ್ಲಿಗೆ ೧೫ ಕೆಜಿ ಅಕ್ಕಿ ಹಾಕುವುದಾಗಿ ಹೇಳಿದರು. ಈ ವೇಳೆ ಇಲ್ಲಿರುವವರು ಒಬ್ಬೊಬ್ಬರು ಗೊಂದಲದ ಹೇಳಿಕೆ ಕೊಟ್ಟಾಗ ತರಾಟೆಗೆ ತೆಗೆದುಕೊಂಡರು. ಇಲ್ಲಿರುವವರು ಎಲ್ಲರು ದೊಡ್ಡ ದೊಡ್ಡ ಶಿಕ್ಷಣ ಪಡೆಯುತ್ತಿದ್ದು, ಎಲ್ಲರೂ ಬುದ್ಧಿವಂತರೆ ಇದ್ದೀರಾ. ಇಷ್ಟೊಂದು ಜನರಿಗೆ ಈ ಹಾಸ್ಟೆಲ್‌ನಲ್ಲಿ ಏಕೆ ಸ್ಟೂಡೆಂಟ್ ಕಮಿಟಿ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಇಷ್ಟು ದಿನವಾದರೂ ಕಮಿಟಿ ಏಕೆ ಇಲ್ಲ. ಕಮಿಟಿ ಮಾಡಬಾರದು ಎಂದು ಹೇಳಿದ್ದರಾ, ತಾಲೂಕು ಅಧಿಕಾರಿ ಮತ್ತು ಇಲಾಖೆ ಜಿಲ್ಲಾ ಅಧಿಕಾರಿಗಳು ಮಾಡಿಲ್ಲ! ಸ್ಟೂಡೆಂಟ್ ಕಮಿಟಿ ಮೂಲಕವೇ ಅಡುಗೆ ಸಾಮಾನುಗಳನ್ನು ಕೊಡಿಸಬೇಕು ಎಂಬುವುದು ಇದೆ. ನಿಮ್ಮ ಪ್ರಕಾರ ೬೫೦ ಇಡ್ಲಿ ತಿನ್ನುತ್ತಿದ್ದೀರಾ, ಇಲ್ಲಿ ೪೦೦ ಇಡ್ಲಿ ಮಾಡುತ್ತಾರೆ. ಇಲ್ಲಿ ಒಂದಕ್ಕೊಂದು ತಾಳೆಯೆ ಆಗುತ್ತಿಲ್ಲ. ಇಲ್ಲಿ ನಡೆಯುವ ಗೋಲ್‌ಮಾಲ್ ಗೊತ್ತಾಗುತ್ತದೆ ಎಂದು ಕಮಿಟಿ ಮಾಡಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಇಲ್ಲಿ ಒಂದು ಲೈಬ್ರೆರಿ ಇಲ್ಲ, ಕಂಪ್ಯೂಟರ್ ರೂಂ ಇಲ್ಲ, ಸ್ಪೋರ್ಟ್ಸ್ ಪರಿಕರಣ ಇಲ್ಲ, ಬಿಸಿ ನೀರು ಸರಿಯಾಗಿ ಬರುತ್ತಿಲ್ಲ ಎಂದು ಅಧಿಕಾರಿಗಳಲ್ಲಿ ಸಮಸ್ಯೆ ಹೇಳಿಕೊಂಡರು. ಆಯುಕ್ತರು ಮಾತನಾಡಿ, ಮುಖ್ಯ ಕಚೇರಿ ಪಕ್ಕದಲ್ಲೆ ಇರುವ ಹಾಸ್ಟೆಲ್‌ಗೆ ಕ್ರೀಡಾ ಸಾಮಗ್ರಿ ಇಲ್ಲ, ಹೊದಿಕೆ ಇಲ್ಲ ಹಾಗೂ ಮೂಲಭೂತ ಸೌಕರ್ಯ ಇಲ್ಲ ಎಂದರೆ ಹೇಗೆ? ಇನ್ನುಳಿದ ಹಾಸ್ಟೆಲ್ ಗತಿ ಏನು. ಇಂತಹ ದುಸ್ತಿತಿಯಲ್ಲಿ ವಿದ್ಯಾರ್ಥಿಗಳು ಇರಬೇಕು ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಶೌಚಾಲಯದ ಬಳಿ ಬಂದಾಗ, ಸೋಲರ್ ಇಲ್ವ ಎಂದು ತಾವೇ ಖುದ್ದು ನಲ್ಲಿ ನೀರು ತಿರುಗಿಸಿದರು. ಇರುವ ಸೋಲಾರ್‌ನಲ್ಲಿ ನೀರೇ ಬರುತ್ತಿಲ್ಲ ಎಂದ ಮೇಲೆ ಇನ್ನೊಂದು ಬೇಕಾ, ಸೋಲಾರ್ ಮೇಲೆ ಇರುವ ಧೂಳು ಸ್ವಚ್ಛ ಮಾಡಿ, ಶೌಚಾಲಯದ ಬಳಿ ಚಿಲಕ, ಲೈಟ್ ಇಲ್ಲ. ಮಕ್ಕಳು ಹೇಗೆ ಶೌಚಾಲಯಕ್ಕೆ ಹೋಗಬೇಕು. ಇನ್ನು ಹೊರಗೆ ಗಬ್ಬು ವಾಸನೆ ಇದೆ. ಪಿಟ್ ಗುಂಡಿ ಭರ್ತಿಯಾಗಿ ಗಬ್ಬು ವಾಸನೆ ಎಂದು ಇಲ್ಲಿನ ವಾತಾವರಣಕ್ಕೆ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಎಚ್ಚರಿಕೆಯ ಸೂಚನೆ ನೀಡಿ ಹಿಂದಿರುಗಿದರು.