ಸಾರಾಂಶ
ಸೋಂಪುರ ಗ್ರಾಮವನ್ನು ಎಲ್ಲರೂ ಸೇರಿಕೊಂಡು ತ್ಯಾಜ್ಯ, ವ್ಯಾಜ್ಯ ಮುಕ್ತ ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಬೇಕು.
ಸೋಂಪುರ ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಸೋಂಪುರ ಗ್ರಾಮವನ್ನು ಎಲ್ಲರೂ ಸೇರಿಕೊಂಡು ತ್ಯಾಜ್ಯ, ವ್ಯಾಜ್ಯ ಮುಕ್ತ ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.ತಾಲೂಕಿನ ಸೋಂಪುರ ಗ್ರಾಮದಲ್ಲಿ ಸ್ಥಳೀಯ ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಬಡತನ ನಿರ್ಮೂಲನೆಗಾಗಿ ಸೋಂಪುರ ಗ್ರಾಮ ಆಯ್ಕೆ ಮಾಡಿಕೊಂಡು, ಸರ್ಕಾರದ ಯೋಜನೆಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊದಲ ಹಂತದಲ್ಲಿ ಅ. ೨ರಂದು ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಈ ಗ್ರಾಮದಲ್ಲಿ ನಾನಾ ಇಲಾಖೆಗಳಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ಕೊಡಿಸುವ ಮೂಲಕ ಗ್ರಾಮದಲ್ಲಿನ ವ್ಯಾಜ್ಯಗಳನ್ನು ಬಗೆಹರಿಸಿ, ಗ್ರಾಮವನ್ನು ಸ್ವಚ್ಛತೆ ಮಾಡಿ, ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡುವ ಜತೆಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಮುಕ್ತ ಮಾದರಿ ಗ್ರಾಮವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.ಬಳಿಕ ನಾನಾ ಇಲಾಖೆಯವರು ತಮ್ಮ ಇಲಾಖೆಯ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡಿದರು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಎಸ್. ಬೇಲೇರಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ಲೋಕೋಪಯೋಗಿ ಅಭಿಯಂತರ ಮಲ್ಲಿಕಾರ್ಜುನ, ಆರ್‌ಎಫ್‌ಒ ಬವಸರಾಜ ಗೋಗೇರಿ, ತೋಟಗಾರಿಕೆ ಅಧಿಕಾರಿ ನಿಂಗನಗೌಡ ಪಾಟೀಲ್, ಕೃಷಿ ಅಧಿಕಾರಿ ಪ್ರಮೋದ ತುಂಬಳ, ವಕೀಲರಾದ ಸಿ.ಎಸ್. ಬನ್ನಪ್ಪಗೌಡ್ರ, ಐ.ಬಿ. ಕೋಳೂರು, ಆರ್.ಜಿ. ಕುಷ್ಟಗಿ, ಶೆಟ್ಟರ್ ಜಗದೀಶ ತೊಂಡಿಹಾಳ, ಎಚ್.ಎ. ನದಾಫ್, ಸುರೇಶ್ ಎಚ್., ಪಶುವೈದ್ಯಾಧಿಕಾರಿ ಸವಿತಾ, ವೈದ್ಯಾಧಿಕಾರಿ ಪವನ್, ಗ್ರಾಪಂ ಅಧ್ಯಕ್ಷೆ ಮಮ್ತಾಜ್ ಬೇಗಂ, ಬಿಆರ್‌ಸಿ ಬಸವರಾಜ ಅಂಗಡಿ ಮತ್ತಿತರರು ಇದ್ದರು. ವಕೀಲ ಕೆ.ಎಂ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.