ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜನಪದ ನಮ್ಮ ಬದುಕಿನ ಜೀವ ಗಂಗೆ. ಜಾನಪದ ಕಲೆಗಳ ಉಳಿವಿಗೆ ಯುವಜನರು ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತ್ ರಾಜ್ಯಾಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, ಜಾನಪದ ಗಾಯನವನ್ನು ಉದ್ಘಾಟಿಸಿ ಮಾತನಾಡಿ, ಜಾನಪದ ನಮ್ಮ ಜೀವನದ ವಾಸ್ತವತೆ ಹಾಗೂ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತದೆ. ಜಾನಪದ ಕಲೆಗಳು, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
ರಾಜ್ಯದಲ್ಲಿಯೇ ಅತೀ ಹೆಚ್ಚು ಜಾನಪದ ಕಲಾ ಪ್ರಕಾರಗಳ ವೈವಿಧ್ಯತೆಯು ಮಂಡ್ಯ ಜಿಲ್ಲೆಯಲ್ಲಿ ಜೀವಂತವಾಗಿದೆ. ರಾಮನಗರ ಜಿಲ್ಲೆ ಬಳಿ ಜಾನಪದ ಲೋಕವನ್ನು ಸ್ಥಾಪಿಸಿ ಕಲೆಗಳ ಉಳಿವು ಹಾಗೂ ಸಂರಕ್ಷಣೆಗೆ ಪಣ ತೊಟ್ಟವರು ಡಾ. ಎಚ್.ಎಲ್.ನಾಗೇಗೌಡರು ನಾಗಮಂಗಲ ತಾಲೂಕಿನವರು ಎಂದರು.ನಮ್ಮ ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳು ಅನಾವರಣಗೊಳ್ಳುವುದು ಜಾನಪದ ಕಲೆಗಳ ಮೂಲಕ. ಮೌಡ್ಯಗಳಿಲ್ಲದ ನಮ್ಮ ನಾಗರೀಕಯ ವೈವಿಧ್ಯತೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿರುವ ಜಾನಪದ ಕಲೆಗಳ ಉಳಿವಿಗೆ ಧೀಕ್ಷೆ ತೊಡಬೇಕು ಎಂದು ಕರೆ ನೀಡಿದರು.
ಜಾನಪದ ನಿಘಂಟು ಅನುವಾದಕ ಕ್ಯಾತನಹಳ್ಳಿ ಚಂದ್ರಣ್ಣ ಮಾತನಾಡಿ, ವಿಶ್ವದಲ್ಲಿಯೇ ಶ್ರೇಷ್ಟ ಜಾನಪದ ವೈವಿಧ್ಯತೆ ಇರುವುದು ಕರ್ನಾಟಕದಲ್ಲಿ. ಜಾನಪದ ನಮ್ಮ ಬದುಕಿನ ಜೀವ ಸೆಲೆಯಾಗಿದೆ ಎಂದರು.ಶಾಸಕ ಹೆಚ್.ಟಿ. ಮಂಜು ಮಾತನಾಡಿ, ಜಾನಪದ ನಮ್ಮ ಸಾಹಿತ್ಯದ ಮೂಲ ಬೇರು. ಜಾನಪದ ಸಂಸ್ಕೃತಿ ವಿಶ್ವದಲ್ಲಿಯೇ ಸರ್ವ ಶ್ರೇಷ್ಠ. ತಾಲೂಕಿನ ಬಂಡಿಹೊಳೆಯ ಅರ್ಚಕ ರಂಗಸ್ವಾಮಿ ಭಟ್ಟರು ಸೇರಿದಂತೆ ಹಲವು ಮಹನೀಯರು ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಇದೇ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಂಜೇಶ್ ಚನ್ನಾಪುರ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ ಮತ್ತು ತಾಲೂಕು ಘಟಕದ ಅಧ್ಯಕ್ಷ ಕತ್ತರಘಟ್ಟ ವಾಸು ಅವರನ್ನು ಪ್ರಾಂಶುಪಾಲೆ ಪ್ರೊ. ಎಚ್.ಎಂ. ಹೇಮಲತಾ ಅಭಿನಂದಿಸಿದರು.ವೇದಿಕೆಯಲ್ಲಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಪ್ರಾಧ್ಯಾಪಕರಾದ ಡಾ. ಸಿ.ರಮೇಶ, ಜಯಕೀರ್ತಿ, ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ, ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಅತ್ತಿಗುಪ್ಪೆ ಸಾಹಿತ್ಯ ಬಳಗದ ಮಾರೇನಹಳ್ಳಿ ಲೋಕೇಶ್, ಪಾಂಡವಪುರ ಕಸಾಪ ಮಾಜಿ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್, ತಾಲೂಕು ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಶೀಳನೆರೆ ಶಿವಕುಮಾರ್, ಲೇಪಾಕ್ಷಿಗೌಡ, ಕನ್ನಡ ನಾಗರಾಜು ಮತ್ತಿತರರು ಇದ್ದರು.