ಸಾರಾಂಶ
-ಕ್ಷೇತ್ರದಲ್ಲಿ 50 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಶಂಕುಸ್ಥಾಪನೆಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು 20 ಕೋಟಿ ವೆಚ್ಚದಲ್ಲಿ ಮಾಗಡಿ ಪಟ್ಟಣದ ಪ್ರಮುಖ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಶಾಸಕ ಹೆಚ್.ಸಿ.ಬಾಲಕೃಷ ಹೇಳಿದರು.ಗುಡ್ ಮಾರ್ನಿಂಗ್ ಮಾಗಡಿ ಕಾರ್ಯಕ್ರಮದಡಿ ಬುಧವಾರ ವಾರ್ಡ್‌ಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಮಾಜಿ ಸಂಸದ ಡಿಕೆ ಸುರೇಶ್ 20 ಕೋಟಿ ವಿಶೇಷ ಅನುದಾನ ಮಾಗಡಿ ಪಟ್ಟಣದ ಅಭಿವೃದ್ಧಿಗಾಗಿ ನೀಡಿದ್ದು. ಎನ್ಇಎಸ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ಹಾಗೂ ಬೈಚಾಪುರ ಸರ್ಕಲ್‌ನಿಂದ ಹೊಂಬಾಳಮ್ಮಪೇಟೆ ಸರ್ಕಲ್‌ವರೆಗೂ ದ್ವಿಪಥದ ರಸ್ತೆಗೆ ಚಾಲನೆ ನೀಡಲಾಗುವುದು. ಡಾಂಬರು ರಸ್ತೆ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.
ಮಾಗಡಿ ಪಟ್ಟಣದಲ್ಲಿ ಸ್ವಚ್ಛತೆ, ರಸ್ತೆ ಗುಂಡಿ ಬಗ್ಗೆ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ಖುದ್ದು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಮುಂಜಾನೆ ಅಧಿಕಾರಿಗಳ ಜೊತೆ ವಾರ್ಡ್‌ಗಳಿಗೆ ಭೇಟಿ ಕೊಟ್ಟು, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಕೊಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯಬಾರದು. ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.50 ಕೋಟಿ ವೆಚ್ಚದಲ್ಲಿ ಶಂಕು ಸ್ಥಾಪನೆ:ಮುಂದಿನ ತಿಂಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕರೆಸಿ 50 ಕೋಟಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿ, 10 ಕೋಟಿ ವೆಚ್ಚದಲ್ಲಿ ಗೌರಮ್ಮನಕೆರೆ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಅಭಿವೃದ್ಧಿಗೆ ಒತ್ತುಕೊಡಲು ಸಾಧ್ಯವಾಗಿಲ್ಲ ಎಂದರು.
ಬೆಂಗಳೂರು ದಕ್ಷಿಣ ನಾಮಕರಣ:ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದ್ದು ಸಿದ್ದರಾಮಯ್ಯನವರು ಕ್ಯಾಬಿನೆಟ್‌ನಲ್ಲಿ ವಿಷಯ ಅನುಮೋದನೆ ಮಾಡಿಲಿದ್ದಾರೆ. ಬೆಂಗಳೂರು ದಕ್ಷಿಣ ನಾಮಕರಣವಾದರು, ಕೇಂದ್ರ ಸ್ಥಾನ ರಾಮನಗರದಲ್ಲೇ ಇರುತ್ತದೆ. ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿದ್ದೇವೆ. ನಾವು ಬೆಂಗಳೂರಿನ ನಂಟನ್ನು ಬೆಳೆಸಿಕೊಂಡಿದ್ದು ಬೆಂಗಳೂರು ಗ್ರಾಮಾಂತರ ಹೆಸರಿನಲ್ಲೇ ಬಂದಿದೆ. ನಮ್ಮ ತಾಲೂಕಿನವರು ಬೆಂಗಳೂರು ಸಂಬಂಧವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದೆವು. ಹಾಸನದವರ ಸಹವಾಸದಿಂದ ಬೆಂಗಳೂರು ಗ್ರಾಮಾಂತರ ತೆಗೆದು ರಾಮನಗರ ಎಂಬ ಹೆಸರನ್ನು ಇಟ್ಟಿದ್ದಾರೆ. ಮತ್ತೆ ಬೆಂಗಳೂರು ನಂಟನ್ನು ಬೆಳೆಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ನಾವೆಲ್ಲರೂ ಮನವಿ ಸಲ್ಲಿಸಿದ್ದು ಈಗ ಮುಖ್ಯಮಂತ್ರಿಗಳು ಕೂಡ ಒಪ್ಪಿಗೆ ಸೂಚಿಸಿ ಹೆಸರು ಬದಲಾವಣೆ ಆಗಲಿದೆ. ರಾಮನಗರ ಜಿಲ್ಲೆ ಆಗುವ ಮೊದಲು ದೊಡ್ಡಬಳ್ಳಾಪುರ ಜಿಲ್ಲೆ ಮಾಡಲು ಹೊರಟಾಗ ದೇವನಹಳ್ಳಿ, ದೊಡ್ಡಬಳ್ಳಾಪುರದ ಜನಗಳು ತೀವ್ರ ವಿರೋಧ ಮಾಡಿ ಬೆಂಗಳೂರು ಗ್ರಾಮಾಂತರವೇ ಇರಬೇಕೆಂದು ಮುಂದುವರಿಸಿದ್ದಾರೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಹೆಸರಿನ ನಂಟನ್ನು ಕಿತ್ತುಕೊಳ್ಳಬೇಡಿ ಎಂದು ಜೆಡಿಎಸ್ ಮುಖಂಡರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ವಾರ್ಡ್ ಭೇಟಿ ವೇಳೆ ಟಿಹೆಚ್ಒ ಚಂದ್ರಶೇಖರ್, ಮುಖಂಡರಾದ ರಾಮಕೃಷ್ಣಪ್ಪ, ಕಲ್ಕೆರೆ ಶಿವಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್, ಬೈಚಾಪುರ ಕಿರಣ್, ಹಳ್ಳಿಕಾರ್ ಹನುಮಂತು, ಜ್ಯೋತಿನಗರ ಮಂಜುನಾಥ್, ಚಂದ್ರಶೇಖರ್, ತೇಜು, ಗುರು, ಆನಂದ್ ಇತರರು ಭಾಗವಹಿಸಿದ್ದರು.