ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಅಂಕ ಪಡೆದವರೆಲ್ಲ ಆದರ್ಶರಲ್ಲ, ಶಿಸ್ತು ಎಂದರೆ ಕೇವಲ ಬಟ್ಟೆ ಧರಿಸುವುದಲ್ಲ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಕುಂಚಗಿರಿಯಲ್ಲಿರುವ ಕುಂಚಿಟಿಗ ಮಠದಲ್ಲಿ ಭಾನುವಾರ ಸಂಜೆ ಆಯಜಿಸಲಾಗಿದ್ದ ಸುಜ್ಞಾನ ಸಂಗಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯುವಜನತೆ ತಂದೆ-ತಾಯಿಯ, ಹಿರಿಯರ, ಸಮಾಜದ ಹಾಗೂ ದೇಶದ ಋಣವನ್ನು ತೀರಿಸಲು ಕಂಕಣ ಬದ್ಧರಾಗಿರಬೇಕು. ನೀವು ಪಡೆದ ಸಹಾಯ ಸೇವೆ ಅವಕಾಶವನ್ನು ಬೇರೆಯವರಿಗೆ ನೀಡಿದಾಗ ಮಾತ್ರ ನಿಮ್ಮ ದುಡಿಮೆಗೆ ಅರ್ಥ ಬರುತ್ತದೆ.ಕೇವಲ ಪಡೆಯುವುದಕ್ಕೆ ಸೀಮಿತವಾದರೆ ಕೊಡುವ ಕೈಗಳಿಗೆ ನೀವು ಮಾಡುವ ಅವಮಾನವಾಗುತ್ತದೆ ತಾನು ಬೆಳೆದು ತನ್ನವರನ್ನು ಬೆಳೆಸುವುದು ಆದರ್ಶ ಅದನ್ನೇ ಭಾರತೀಯ ಸಂಸ್ಕೃತಿ ಸಂತರು ಆಧ್ಯಾತ್ಮ ಪುರುಷರು ಸಾರಿ ಸಾಧಿಸಿ ತೋರಿಸಿದ್ದಾರೆ ಎಂದರು.ಇವತ್ತಿನ ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಣಿಸುತ್ತಿದೆ ಅದರೆ ಸೌಜನ್ಯ ಸಂಸ್ಕಾರಗಳು ಕಾಣಿಸುತ್ತಿಲ್ಲ ಕೇವಲ ನೀವು ಒಳ್ಳೆ ಬಟ್ಟೆಯನ್ನು ಧರಿಸಿದರೆ ಸಾಲದು ನಡತೆಯು ಮುಖ್ಯವಾಗುತ್ತದೆ ಅಂಕ ಪಡೆದವರೆಲ್ಲ ಆದರ್ಶ ಪುರುಷರಲ್ಲ ಅಂಕೆ ಸಂಖ್ಯೆಗಳಿಗಿಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮಹೇಶ್ ಸಂಗಮ್ ಮಾತನಾಡಿ, ಗುರುಗಳಿಂದ ಧನ ಸ್ವರೂಪದಲ್ಲಿ ಸಹಾಯ ನಿರೀಕ್ಷಿಸುವ ಬದಲು ಅವರ ನೆರಳಿನಲ್ಲಿ ನಡೆದಾಗ ಅನೇಕ ರೀತಿಯ ಲಾಭಗಳು ಸಿಗಲು ಸಾಧ್ಯ ಕೇವಲ ಕುಟುಂಬಕ್ಕಾಗಿ ದುಡಿಯದೇ ಸಮಾಜಕ್ಕೂ ದುಡಿಯಬೇಕೆಂಬ ಅರಿವನ್ನು ಜಾಗೃತಿಗೊಳಿಸಿದವರು ಶಾಂತವೀರ ಶ್ರೀಗಳು ಅವರ 25 ವರ್ಷದ ಸಮಾಜಕ್ಕೆ ಸಮರ್ಪಿತ ಬದುಕು ನಮ್ಮಂತ ಸಣ್ಣಪುಟ್ಟ ಸಮುದಾಯಗಳು ಜಾಗೃತಿಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.ಉಪನ್ಯಾಸ ನೀಡಿದ ಶಿಕ್ಷಕ ಸಾಹಿತಿ ಸಿದ್ಧವನಹಳ್ಳಿ ವೀರೇಶ್ ಕುಮಾರ್, ವಿದ್ಯಾರ್ಥಿಗಳ ಆಸಕ್ತಿ ಮತ್ತು ಪೋಕ್ಷಕರ ಗಮನ ಕೇವಲ ಮೊಬೈಲ್ ಕಡೆಗೆ ಜರುಗುತ್ತಿರುವುದು ಭವಿಷ್ಯದ ದೃಷ್ಟಿಗೆ ಒಳಿತಲ್ಲ ವಿದ್ಯಾರ್ಥಿಗಳು ಪೋಷಕರನ್ನು ಗೌರವದಿಂದ ಕಾಣುವುದು ಪೋಷಕರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಆರೈಕೆ ಮಾಡುವುದು ಸಮಾಜಕ್ಕೆ ಬೇಕಾಗಿದೆ, ಆದರೆ ಇಂದಿನ ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತವಾಗಿ ಆದರ್ಶಗಳು ಮರೆಮಾಚುತ್ತಿವೆ. ಹಿರಿಯರನ್ನು ಉದಾಸೀನ ಮಾಡಿ ಕೇವಲ ಅಂತಸ್ತುಗಳನ್ನು ನಿರ್ಮಾಣ ಮಾಡುವ ಕಡೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಯ ಬದುಕು ಆಸಕ್ತದಾಯಕವಾಗಿರಬೇಕು ಅನ್ವೇಷಣೆಯ ಕಡೆಗೆ ಆದರ್ಶಗಳ ಪರಿಪಾಲನೆ ಕಡೆಗೆ ಗಮನ ಕೊಡಬೇಕು. ಇವತ್ತು ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೆ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯುವ ಕಡೆಗೆ ಗಮನಹರಿಸಿ ಎಂದರು.ಕಾರ್ಯಕ್ರಮದಲ್ಲಿ ಸಮುದಾಯದ ಅತಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಲಾಯಿತು. ಇದೆ ವೇಳೆ ಶ್ರೀ ಶಾಂತವೀರ ಸ್ವಾಮೀಜಿ ತಾವು ಕೃಷಿಯಿಂದ ಗಳಿಸಿದ 6 ಲಕ್ಷ ರು. ಚೆಕ್‌ನ್ನು ಸಮುದಾಯದ ವಿದ್ಯಾರ್ಥಿಗಳ ಶಾಶ್ವತ ಠೇವಣಿ ನಿಧಿಗೆ ನೀಡಿದರು.