ಸಾರಾಂಶ
ಭಟ್ಕಳ: ಜಿಲ್ಲೆಯ ಅರಣ್ಯಭೂಮಿ ಸಾಗುವಳಿದಾರರ ಹಿತರಕ್ಷಣೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಉನ್ನತ ಮಟ್ಟದ ಚರ್ಚೆಗೆ ಏರ್ಪಾಡು ಮಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.
ಜಿಲ್ಲೆಯ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಹೊನ್ನಾವರದ ಚಂದ್ರಕಾಂತ ಕೊಚರೇಕರ, ಗೌರವಾಧ್ಯಕ್ಷ ಭಟ್ಕಳದ ರಾಮಾ ಮೊಗೇರ, ಸಂಚಾಲಕ ಅಂಕೋಲಾದ ಜಿ.ಎಂ. ಶೆಟ್ಟಿ ಮುಂತಾದ ಪ್ರಮುಖರ ನಿಯೋಗಕ್ಕೆ ಭರವಸೆ ನೀಡಿದರು.ಮುರುಡೇಶ್ವರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗ, ಜಿಲ್ಲೆಯ ಅರಣ್ಯ ಭೂಮಿಸಾಗುವಳಿದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಸಚಿವರ ಗಮನ ತಂದಿತು. ಅಲ್ಲದೇ ಜಿಲ್ಲೆಯ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿ ಆಗ್ರಹಪಡಿಸಿತು.
ಜೀವನೋಪಾಯಕ್ಕೆ 2005ರ ಪೂರ್ವದಿಂದ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಅರಣ್ಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಜನರಿಗೆ, ಭೂಮಿಯ ಹಕ್ಕು ನೀಡಲು ಅರಣ್ಯ ಹಕ್ಕು ಕಾಯ್ದೆಯ ಸರಳೀಕರಣ ಆಗಬೇಕು ಮತ್ತು ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಜಿಲ್ಲೆಯ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಆಗಬೇಕು.ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯಭೂಮಿಯ ಹಕ್ಕು ನೀಡುವ ವಿಚಾರದಲ್ಲಿ ಮಾನದಂಡದ ಬಗ್ಗೆ ಎದ್ದಿರುವ ಗೊಂದಲವನ್ನು ಬಗೆಹರಿಸಬೇಕು. ಅರಣ್ಯ ಹಕ್ಕುಕಾಯ್ದೆಯಲ್ಲಿ, ಇತರ ಪಾರಂಪರಿಕ ಅರಣ್ಯವಾಸಿಯ ಬಗೆಗೆ ನೀಡಿರುವ ವಿವರಣೆಯನ್ನು ಅರ್ಥೈಸುವಲ್ಲಿ ಉನ್ನತ ಅಧಿಕಾರಿಗಳಲ್ಲಿ ಇರುವ ಗೊಂದಲವನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಹೋರಾಟ ಸಮಿತಿಯ ಪ್ರಮುಖರೊಂದಿಗೆ ಜಿಲ್ಲೆಯಲ್ಲಿಯೇ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಕಸ್ತೂರಿರಂಗನ್ ವರದಿಯ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಲು ಕೇಂದ್ರದ ಮೇಲೆ ಒತ್ತಡ ತರಬೇಕು. ಜಿಲ್ಲೆಯ ಜನವಸತಿ ಪ್ರದೇಶವನ್ನು ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯಕ್ಕೆ ಒಳಪಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ನಿಯೋಗವು ತನ್ನ ಮನವಿಯಲ್ಲಿ ಒತ್ತಾಯಪಡಿಸಿದೆ.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಗೌರವಾಧ್ಯಕ್ಷ ರಾಮಾ ಮೊಗೇರ, ಸಂಚಾಲಕ ಜಿ.ಎಂ. ಶೆಟ್ಟಿ ಅಚವೆ, ಯೋಗೇಶ ರಾಯ್ಕರ ಉಪ್ಪೋಣಿ, ರಾಮಕೃಷ್ಣ ಹೆಗಡೆ, ತ್ರಿಯಂಬಕ ಬಾಂದೇಕರ, ರಾಮದಾಸ ನಾಯಕ ಹಿಲ್ಲೂರ, ನಾಗೇಶ ಜೆ. ದೇವಡಿಗ ಶಿರಾಲಿ, ಶಿವಾನಂದ ನಾಯ್ಕ ಬನವಾಸಿ, ಸಿದ್ದು ಪಾಟೀಲ ಮದುರವಳ್ಳಿ, ಜಿ.ಟಿ. ಹಳ್ಳೇರ ಅಳ್ಳಂಕಿ, ಮನೋಹರ ಅಂಕೋಲೇಕರ ಮುಂತಾದವರಿದ್ದರು.