ಸಾರಾಂಶ
935 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ
ಕನ್ನಡಪ್ರಭ ವಾರ್ತೆ ಕಲಬುರಗಿಸಂವಿಧಾನದ ಪೀಠಿಕೆಯಲ್ಲಿರುವಂತೆ ನಾಡಿನ ಪ್ರತಿ ಪ್ರಜೆಯು ಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ದೊರಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಪೂಜ್ಯ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್‌ನನಲ್ಲಿ (ಅಪ್ಪಾ ಪಬ್ಲಿಕ್ ಶಾಲೆ) ಆಯೋಜಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಮಾಡುವ ಆದೇಶ ಪತ್ರ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಪತ್ರ ಮತ್ತು ಕ್ರೋಮ್ ಬುಕ್ ವಿತರಣೆ, ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೌರಕಾರ್ಮಿಕರು ನಗರದ ಬೆನ್ನೆಲಬು ಇದ್ದಂತೆ. ಬೆಳಿಗೆದ್ದು ಕಾರ್ಮಿಕರು ಸ್ವಚ್ಛ ಮಾಡದೆ ಹೋದರೆ ಸುಂದರ ಕಲಬುರಗಿ ನೆನಸಿಕೊಳ್ಳಲು ಆಗಲ್ಲ. ಆಡಳಿತ ನಡೆಸುವುದು ಸುಲಭ. ಆದರೆ ನಗರದ ಸ್ವಚ್ಛತೆಯ ರಾಯಭಾರಿಗಳಾಗಿರುವ ತಮ್ಮ ಕೆಲಸಕ್ಕೆ ನನ್ನ ಕೋಟಿ ವಂದನೆಗಳು. ಇಂದಿನಿಂದ ನೀವು ಪಾಲಿಕೆಯ ನೌಕರರಾಗಿದ್ದು, ಗುತ್ತಿಗೆ ಪದ್ದತಿ ಇಂದಿನಿಂದ ಕೊನೆಯಾಗಲಿದೆ. ನಾಡಿನ ಜನ ತಮ್ಮ ಪಕ್ಷದ ನೇತೃತ್ವದ ಸರ್ಕಾರಕ್ಕೆ ಆಶೀರ್ವಾದ ನೀಡಿದಾಗಲೆಲ್ಲ ಈ ರೀತಿಯಾಗಿ ಜನರಿದಗೆ ಸ್ಪಂದಿಸುವಂತಹ, ಶ್ರಮಿಕ ವರ್ಗಕ್ಕೆ ನ್ಯಾಯ ನೀಡುವಂತಹ ಕೆಲಸ ಮಾಡಿದ್ದೇವೆ ಎಂದರು.
ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ದಿ. ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದ 371ಜೆ ಕಾಯ್ದೆ ಪ್ರದೇಶಕ್ಕೆ ಲಭಿಸಿದೆ. ಕಲಬುರಗಿ ಜನರ ಆಶೀರ್ವಾದಿಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿಗೆ ಪ್ರವೇಶ ಮಾಡಿದ ಕೂಡಲೇ ಯುಪಿಎ ಸರ್ಕಾರ ಈ ಭಾಗಕ್ಕೆ 371ಜೆ ವಿಶೇಷ ಮೀಸಲಾತಿ ಕಲ್ಪಿಸುವ ಮೂಲಕ ನ್ಯಾಯ ಒದಗಿಸಿದ್ದರು ಎಂದರು.ಕಲಬುರಗಿ ಸ್ಮಾರ್ಟ್ ಸಿಟಿ ಶತಸಿದ್ಧ:
ಹಿಂದೆ 371ಜೆ ಕಾಯ್ದೆಯನ್ನು ಎನ್‌ಡಿಎ ಸರ್ಕಾರ ವಿರೋಧಿಸಿತ್ತು, ನಮ್ಮ ಯುಪಿಎ ಸರ್ಕಾರ ಅದನ್ನು ಜಾರಿಗೆ ತಂತು. ಅದೇ ರೀತಿ ಈಗ ಕಲಬುರಗಿ ಸ್ಮಾರ್ಟ್ ಸಿಟಿ ಮಾಡಲು ಕೇಂದ್ರ ಹಿಂದೇಟು ಹಾಕುತ್ತಿದೆ. ಆದರೆ ಕಲಬುರಗಿ ಜನರ ಕನಸಿನಂತೆ ಭವಿಷ್ಯದ 25 ವರ್ಷದ ಮುಂದಾಲೋಚನೆಯೊಂದಿಗೆ ಕಲಬುರಗಿಯನ್ನು ಸ್ಮಾರ್ಟರ್ ಸಿಟಿ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಶಾಸಕ ಅಲ್ಲಮಪ್ರಭು ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮತ್ತು ಶಾಸಕಿ ಕನೀಜ್ ಫಾತಿಮಾ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆಯ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಇತರರು ಇದ್ದರು.