ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಬದ್ಧ: ಶಾಸಕ ಬಸನಗೌಡ

| Published : Mar 14 2024, 02:01 AM IST

ಸಾರಾಂಶ

ಜಾಮೀಯಾ ಮಸೀದ್ ಕಟ್ಟಡ ನವೀಕರಣ ಹಾಗೂ ಈದ್ಗಾ ಅಭಿವೃದ್ಧಿ ಕಾಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಳಿಕ ಜರುಗಿದ ಇಫ್ತಿಯಾರ್ ಕೂಟದಲ್ಲಿ ಶಾಸಕ ಆರ್.ಬಸನಗೌಡ ಭಾಗಿಯಾದರು.

ಮಸ್ಕಿ: ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಕೆಲಸಗಳಿಗಾಗಿ ಸರ್ಕಾರ ಒಂದು ಕೋಟಿಗೂ ಅಧಿಕ ಅನುದಾನ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಶಾದಿ ಮಹಲ್‌ ನಿರ್ಮಾಣಕ್ಕೆ ಬೇಕಾಗುವ ಅನುದಾನವನ್ನು ಒದಗಿಸಲಾಗುವುದು ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಜಾಮೀಯಾ ಮಸೀದ್ ಕಟ್ಟಡ ನವೀಕರಣ ಹಾಗೂ ಈದ್ಗಾ ಅಭಿವೃದ್ಧಿ ಕಾಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ಆಡಳಿತ ನೀಡುತ್ತಿದ್ದೇವೆ. ಮಸ್ಲಿಂ ಸಮಾಜದ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಸರ್ಕಾರ ಶ್ರಮಿಸುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮಾಜದ ಸಹಕಾರ ಇದ್ದರೆ ಇನ್ನಷ್ಟು ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ ಎಂದರು.

ಹಿರಿಯ ಮುಖಂಡರಾದ ಅಬ್ದುಲ್ ಅಜಿಜ್ ಮಾತನಾಡಿ, ರಾಜಕೀಯ ಪಕ್ಷಗಳು ಮುಸ್ಲಿಂರನ್ನು ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಳ್ಳದೆ ರಾಜಕೀಯ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಫರಿದ್ಖಾನ್ ಸಾಬ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಸಿದ್ದನಗೌಡ ಮಟೂರ್ ಸೇರಿದಂತೆ ಅನೇಕರು ಇದ್ದರು.

ಇಫ್ತಿಯಾರ್ ಕೂಟ: ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೇರಿದಂತೆ ಇತರ ಮುಖಂಡರು ಮುಸ್ಲಿಂ ಭಾಂದವರ ಜೊತೆಗೆ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡರು.