ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಅಗೌರವಗಳ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತಬೇಕು. ಪ್ರತಿ ರಕ್ಷಣಾ ಕಾಯ್ದೆಗಳು ಸಂಘಟಿತ ಹೋರಾಟದ ಪ್ರತಿಫಲವಾಗಿವೆ. ಈ ವಿಷಯದಲ್ಲಿ ಕೀಳರಿಮೆ, ಹಿಂಜರಿಕೆ ಇಲ್ಲದೇ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಾಗ ದಿಟ್ಟತನದಿಂದ ಮಾತಾಡಬೇಕು.

ಧಾರವಾಡ:

ಪೋಕ್ಸೋ ಸೇರಿದಂತೆ ಯಾವುದೇ ಮಹಿಳಾ ಭದ್ರತೆಯ ಕಾನೂನುಗಳು ಸರಿಯಾಗಿ ಕಾರ್ಯಗತವಾಗಬೇಕಾದರೆ, ಮೊದಲು ಮಹಿಳೆಯರು, ಜನಸಾಮಾನ್ಯರು ಪ್ರಜ್ಞಾವಂತರಾಗಿ ಅನ್ಯಾಯಗಳನ್ನು ಪ್ರಶ್ನಿಸುವಂತಾಗಬೇಕು ಎಂದು ನ್ಯಾಯವಾದಿ ಪ್ರತಾಪ್ ಜಾಧವ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ನಗರದ ಕೆ.ಇ. ಬೋರ್ಡ್ ಪಿಯು ಕಾಲೇಜಿನಲ್ಲಿ ‘ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧ ತಡೆಗಟ್ಟಲು ಜಾಗೃತ ಸಮಾವೇಶದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಅಗೌರವಗಳ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತಬೇಕು. ಪ್ರತಿ ರಕ್ಷಣಾ ಕಾಯ್ದೆಗಳು ಸಂಘಟಿತ ಹೋರಾಟದ ಪ್ರತಿಫಲವಾಗಿವೆ. ಈ ವಿಷಯದಲ್ಲಿ ಕೀಳರಿಮೆ, ಹಿಂಜರಿಕೆ ಇಲ್ಲದೇ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಾಗ ದಿಟ್ಟತನದಿಂದ ಮಾತಾಡಬೇಕು ಎಂದರು.

ಸಂಘಟನೆ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ ಮಾತನಾಡಿ, ನಿರಂಕುಶತ್ವವನ್ನು ಪ್ರತಿಭಟಿಸಿ ಇಡೀ ಜಗತ್ತಿಗೆ ಮಾದರಿಯಾದ ಮಿರಾಬಲ್ ಸಹೋದರಿಯರನ್ನು ನೆನೆಯಬೇಕು. ಇಂದಿಗೂ ಮಹಿಳೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಭದ್ರತೆಗಳಿಂದ ವಂಚಿತಳಾಗಿದ್ದಾಳೆ. ಇನ್ನೊಂದೆಡೆ ಪ್ರತಿನಿತ್ಯ ಅತ್ಯಾಚಾರ, ದೌರ್ಜನ್ಯ-ಹಿಂಸೆ, ಅಗೌರವ -ಅಪಮಾನಗಳಿಗೆ ಬಲಿಯಾಗುತ್ತಿದ್ದಾಳೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ವಿಕೃತ ಪಾತಕಗಳು ಪರಾಕಾಷ್ಟೆ ತಲುಪಿವೆ. ಇಂತಹ ಕ್ರೂರ ವ್ಯವಸ್ಥೆಯ ವಿರುದ್ಧ ಮಹಿಳೆಯರನ್ನು ಸೇರಿದಂತೆ, ಇಡೀ ಜನಸಮುದಾಯವನ್ನು ಜಾಗೃತಗೊಳಿಸಿ, ಬಲಿಷ್ಠ ಜನ ಚಳವಳಿ ಬೆಳೆಸುವ ಉದ್ದೇಶದಿಂದ ರಾಜ್ಯವ್ಯಾಪಿ ವಿವಿಧ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಪ್ರಮುಖವಾಗಿ ಅಂತರ್ಜಾಲ, ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಅಶ್ಲೀಲತೆ-ಕ್ರೂರತ್ವ, ಮದ್ಯ ಮಾದಕವು ಮಹಿಳೆಯರ ಮೇಲಿನ ದೌರ್ಜನಕ್ಕೆ ಮುಖ್ಯ ಕಾರಣವಾಗಿವೆ. ಪರಿಣಾಮವಾಗಿ ಸಮಾಜದಲ್ಲಿ ಸಂಸ್ಕೃತಿ, ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇದನ್ನು ತಡೆಗಟ್ಟಲು, ಅತ್ಯಾಚಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಲು ಆಳ್ವಿಕರು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಾಂಶುಪಾಲರಾದ ಸುನಿತಾ ಕಡಪಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಂಗೂಬಾಯಿ ಕೋಕರೆ, ಎಸ್‌.ಎಲ್‌. ಶೇಖರಗೋಳ, ಅರುಣ್ ಗಂಜಿಗಟ್ಟಿ, ದೇವಮ್ಮ ದೇವತ್ಕಲ್ ಇದ್ದರು.