ಸಾರಾಂಶ
ಶಿರಸಿ: ಪರಸ್ಪರ ಹೊಂದಾಣಿಕೆಯಿಂದ ದಂಪತಿಗಳು ಗೃಹಸ್ಥಾಶ್ರಮ ಧರ್ಮವನ್ನು ನಿಭಾಯಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲಿ ಮಠದಲ್ಲಿ ನಡೆದ ಧನ್ಯೋಗೃಹಸ್ಥಾಶ್ರಮ ದಂಪತಿ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ, ನವದಂಪತಿಗಳಿಗೆ ಹಿತವಚನ ಬೋಧಿಸಿದರು.ಕುಟುಂಬದಲ್ಲಿ ನನ್ನ ಮಾತೇ ನಡೆಯಬೇಕು ಎನ್ನುವ ಭಾವದಿಂದಲೇ ಬಹಳಷ್ಟು ಸಲ ಸಣ್ಣ ಸಣ್ಣ ವಿಷಯಗಳ ಕುರಿತು ಭಿನ್ನಾಭಿಪ್ರಾಯ ಉಂಟಾಗುತ್ತದೆ. ಇಂತಹ ಮನಸ್ಥಿತಿಯ ಬದಲಾಗಿ ಇಬ್ಬರೂ ಹೊಂದಾಣಿಕೆ ಮನೋಭಾವದಿಂದ ಹೋದರೆ ಗೃಹಸ್ಥಾಶ್ರಮ ಧನ್ಯತೆಯತ್ತ ಸಾಗುತ್ತದೆ. ಸಮಾಜದ ಆಧಾರಸ್ತಂಭವಾದ ಗೃಹಸ್ಥ ಧರ್ಮದ ಆಚರಣೆ ಸರಿಯಾದ ರೀತಿಯಲ್ಲಿ ಆದರೆ ಪ್ರತಿಯೊಂದು ಮನೆಯೂ ಧಾರ್ಮಿಕ ಕೇಂದ್ರವಾಗುತ್ತದೆ ಎಂದರು.ಪ್ರತಿ ಮನೆಯೂ ಧಾರ್ಮಿಕ ಕೇಂದ್ರವಾದರೆ ವೈಯಕ್ತಿಕವಾಗಿಯೂ ಲಾಭ, ಸಮಾಜಕ್ಕೂ ಒಳಿತು. ಹಾಗಾಗಿ ಪ್ರತಿಯೊಂದು ದಂಪತಿಗಳು ಪರಸ್ಪರ ಅರಿತು ಬೆರೆತು ಬದುಕುವುದನ್ನು ಆಚರಣೆಗೆ ತಂದುಕೊಳ್ಳಬೇಕು ಎಂದು ಆಶಿಸಿದ ಶ್ರೀಗಳು, ಪ್ರತಿಯೊಂದು ಮಗುವಿಗೂ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಸಂಸ್ಕಾರವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್. ಹೆಗಡೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಾರಾಯಣ ಭಟ್ ಬಳ್ಳಿ ಮಾತನಾಡಿದರು.
ಶಿಬಿರದಲ್ಲಿ ಡಾ. ವಿನಾಯಕ ಹೆಬ್ಬಾರ ಶಿರಸಿ ಭ್ರೂಣಹತ್ಯೆಯ ದುಷ್ಪರಿಣಾಮಗಳು ಹಾಗೂ ಉತ್ತಮ ಸಂತಾನಕ್ಕೆ ಸಿದ್ಧತೆಗಳು ಎಂಬ ವಿಷಯದ ಕುರಿತು, ವೇ.ಮೂ. ಸೀತಾರಾಮ್ ಭಟ್ ಮತ್ತಿಗಾರ ಅವರು ಉತ್ತಮ ಸಂತಾನಕ್ಕೆ ಶಾಸ್ತ್ರಸೂತ್ರಗಳು ಎನ್ನುವ ವಿಷಯದ ಮೇಲೆ ಹಾಗೂ ವೇದಮೂರ್ತಿ ಅನಂತಮೂರ್ತಿ ಭಟ್ ಯಲೂಗಾರ ಅವರು ಬದುಕಿನ ಧನ್ಯತೆಯ ರಾಜಮಾರ್ಗ ಗೃಹಸ್ಥಾಶ್ರಮ ವಿಷಯದ ಮೇಲೆ ಮಾರ್ಗದರ್ಶಕ ಉಪನ್ಯಾಸ ನೀಡಿದರು.ಶಿಬಿರಾರ್ಥಿಗಳಾದ ಸೀತಾರಾಮ ಭಟ್ ವೇದಘೋಷಗೈದರು. ರಮ್ಯಶ್ರೀ ಹೆಗಡೆ ಕಡಬಾಳ ಹಾಗೂ ಸೌಜನ್ಯ ಹೆಗಡೆ ಬಿಳಗಿ ಪ್ರಾರ್ಥನೆ ಹಾಡಿದರು. ಶಿಬಿರ ಸಂಚಾಲಕ ವಿ.ಎಂ. ಹೆಗಡೆ ತ್ಯಾಗಲಿ ಉದ್ದೇಶವನ್ನು ವಿವರಿಸಿದರು. ಹೇಮಲತಾ ಪ್ರಸಾದ ಹೆಗಡೆ ಕುಂಟೆಮನೆ ವಂದಿಸಿದರು. ಭವ್ಯ ಅಭಿಷೇಕ ಹೆಗಡೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಮಾತೃ ಮಂಡಲ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ವಿ. ಹೆಗಡೆ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ತ್ರಯಂಬಕ ಹೆಗಡೆ ಉಪಸ್ಥಿತರಿದ್ದರು.