ದಾಂಡೇಲಿ: ಪಣಸೋಳಿ ಆನೆ ಶಿಬಿರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಲಕ್ಕು ಪಟಗಾರೆ ಅವರು ಅಲ್ಲಿದ್ದ ಆನೆ ದಾಳಿಗೆ ಒಳಗಾಗಿದ್ದು, ಶಾಶ್ವತ ಅಂಗವೈಕಲ್ಯದಿoದ ಬಳಲುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಮಾತ್ರ ಲಕ್ಕು ಪಟಕಾರೆ ಅವರ ಕುಟುಂಬದವರ ನೆರವಿಗೆ ಬಂದಿಲ್ಲ.
ದಾಂಡೇಲಿಯ ಪಣಸೋಲಿಯಲ್ಲಿ ಆನೆ ಶಿಬಿರವಿದೆ. ಅಲ್ಲಿ ಆನೆಗಳಿಗೆ ವಿವಿಧ ಬಗೆಯ ತರಬೇತಿ ನೀಡಲಾಗುತ್ತದೆ. ಪ್ರವಾಸೋದ್ಯಮ ಚಟುವಟಿಕೆಗೆ ಸಹ ಇಲ್ಲಿನ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಬಡಾ ಕಾನ ಬಳಿಯ ಶಿರಡಾ ಗ್ರಾಮದ ಲಕ್ಕು ಖಂಡು ಪಟಕಾರೆ ಅವರು ಹೊರಗುತ್ತಿಗೆ ಆಧಾರದಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿ ಆನೆ ಕಾವಾಡೆಯಾಗಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದರು. 2025ರ ಜುಲೈ 30ರಂದು ಕರ್ತವ್ಯದಲ್ಲಿದ್ದ ಅವರ ಮೇಲೆ ಅಲ್ಲಿದ್ದ ಆನೆಯೊಂದು ದಾಳಿ ಮಾಡಿತು. ಅದರಿಂದ ಲಕ್ಕು ಪಟಕಾರೆ ಅವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದರು. ಆ ವೇಳೆ ಅವರ ಯೋಗಕ್ಷೇಮ ವಿಚಾರಣೆಗೆ ಬಂದ ಕೆಲವು ಅಧಿಕಾರಿಗಳು ಪುಡಿಗಾಸು ನೀಡಿ, ಪ್ರಕರಣ ಮುಚ್ಚುವ ಪ್ರಯತ್ನ ಮಾಡಿದ್ದು ಬಿಟ್ಟರೆ, ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾತ್ರ ಮಾಡಲಿಲ್ಲ.ಲಕ್ಕು ಪಟಕಾರೆ ಅವರನ್ನು ಮೊದಲು ದಾಂಡೇಲಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಅವರು ಮೊದಲಿನಂತಾಗಲಿಲ್ಲ. ಯಾವುದೇ ಪರಿಹಾರ ನೀಡದೆ ಲಕ್ಕು ಲಕ್ಕು ಪಟಕಾರೆ ಅವರನ್ನು ಅಧಿಕಾರಿಗಳು ಕೆಲಸದಿಂದ ತೆಗೆದರು. ಈಗ ಲಕ್ಕು ಪಟಕಾರೆ ಕುಟುಂಬ ಬೀದಿಗೆ ಬಂದಿದೆ.
ಕರ್ತವ್ಯದ ವೇಳೆ ಅವಘಡ ನಡೆದಿದ್ದರಿಂದ ಲಕ್ಕು ಪಟಗಾರೆ ಅವರಿಗೆ ಸೂಕ್ತ ಪರಿಹಾರ ಬರಬೇಕಿತ್ತು. ಅವರ ಆರೋಗ್ಯಕ್ಕೆ ಅನುಗುಣವಾಗಿ ಪರ್ಯಾಯ ಉದ್ಯೋಗ ಸಿಗಬೇಕಿತ್ತು ಅಥವಾ ಜೀವನಕ್ಕೆ ಆಧಾರವಾಗುವ ರೀತಿಯಲ್ಲಿ ಆರ್ಥಿಕ ನೆರವನ್ನಾದರೂ ಕೊಡಬೇಕಿತ್ತು. ಕರಡಿ ದಾಳಿಗೆ ಒಳಗಾದವರಿಗೆ ₹10 ಲಕ್ಷ ವರೆಗೆ ಪರಿಹಾರ ನೀಡಿರುವ ನಿದರ್ಶನಗಳಿವೆ. ಆದರೆ ಆನೆ ದಾಳಿಗೆ ಒಳಗಾದವರಿಗೆ ಕಿಂಚಿತ್ತೂ ಕಾಸು ನೀಡದಿರುವುದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ.