ಸಾರಾಂಶ
ಚಿಕ್ಕಮಗಳೂರು, ವಿದ್ಯಾರ್ಥಿಗಳು ಸಂಸ್ಕಾರವಂತರಾದಾಗ ಮಾತ್ರ ಭಾರತ ದೇಶದ ಸಂಸ್ಕೃತಿ ಪರಂಪರೆಗೆ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ಚಿಕ್ಕಮಗಳೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ಸಂಸ್ಕಾರವಂತರಾದಾಗ ಮಾತ್ರ ಭಾರತ ದೇಶದ ಸಂಸ್ಕೃತಿ ಪರಂಪರೆಗೆ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.ಜಿಲ್ಲಾ ಆಟದ ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ತೇಗೂರಿನ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳ
ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ. ಇದನ್ನು ನೋಡಿದಾಗ ನಮ್ಮ ಶಾಲಾ ಕಾಲೇಜಿನ ವ್ಯಾಸಂಗದ ದಿನಗಳು ನೆನಪಿಗೆ ಬರುತ್ತದೆ. ಎಲ್ಲರೂ ಗೆಲ್ಲುತ್ತೇವೆಂಬ ಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದು, ಸೋತವರು ದೃತಿಗೆಡದೆ ಮುಂದೆ ಯಶಸ್ಸು ಗಳಿಸು ತ್ತೇವೆಂಬ ಆಶಾಭಾವನೆ ಹೊಂದಬೇಕು ಎಂದರು.ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜಿಲ್ಲೆ, ರಾಜ್ಯ, ದೇಶಕ್ಕೆ ಒಳ್ಳೆಯ ಕೀರ್ತಿ ತರಬೇಕೆಂದು ಹಾರೈಸಿದ ಅವರು, ಒಲಂಪಿಕ್ ಕ್ರೀಡಾಕೂಟದಲ್ಲಿ 5 ಚಿನ್ನ, ಒಂದು ಬೆಳ್ಳಿ ಪದಕ ತಂದು ಭಾರತ ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸಿದ ಅವರು ಈ ನಿಟ್ಟಿನಲ್ಲಿ ನೀವೂ ಸಹ ಸಾಧನೆ ಮಾಡಿ ಎಂದು ಹಾರೈಸಿದರು.ಪೋಷಕರ ಆಸೆಯಂತೆ ಪಠ್ಯ ಚಟುವಟಿಕೆಗೆ ಪ್ರಥಮ ಆದ್ಯತೆ ನೀಡಿ. ಆದರೆ ದೇಶ ಪ್ರೇಮ, ಸಂಸ್ಕೃತಿ ಮರೆಯಬಾರದು, ವಿದ್ಯಾರ್ಥಿನಿಯರು ಮಾದಕ ವ್ಯಸನ ವ್ಯಕ್ತಿಗಳಿಂದ ದೂರ ಇರಬೇಕೆಂದು ಕಿವಿಮಾತು ಹೇಳಿದರು.ಪದವಿಪೂರ್ವ ಕಾಲೇಜುಗಳ ಇಲಾಖೆ ಉಪ ನಿರ್ದೇಶಕ ಪುಟ್ಟಾನಾಯ್ಕ ಮಾತನಾಡಿ, ದೇಶಕ್ಕೆ ರೈತರು ಕೃಷಿಯಲ್ಲಿ ಬೆನ್ನೆಲುಬಾಗಿದ್ದಾರೆ. ಅದೇ ರೀತಿ ಕ್ರೀಡಾ ಚಟುವಟಿಕೆಯಲ್ಲಿ ಕ್ರೀಡಾ ಶಿಕ್ಷಕರು ಬೆನ್ನೆಲುಬಾಗಿದ್ದಾರೆ. ಕ್ರೀಡೆಗಳು ಸುಗಮ, ಸುಲಲಿತವಾಗಿ ನಡೆಯಬೇಕಾದರೆ ಕ್ರೀಡಾ ಶಿಕ್ಷಕರ ಶ್ರಮ ಮುಖ್ಯ ಎಂದರು.ಕ್ರೀಡೆಗಳು ಹಾಗೂ ಕ್ರೀಡಾಪಟುಗಳು ದೇಶದ ಭಾವೈಕ್ಯತೆ ಸಂಕೇತ. ಕ್ರೀಡೆಗೆ ಎಲ್ಲಿ ಉತ್ಸಾಹ, ಪ್ರೋತ್ಸಾಹ ದೊರೆಯುತ್ತದೆಯೋ ಅಲ್ಲಿ ಭಾವೈಕ್ಯತೆ ಸಮ್ಮಿಲನವಾಗುತ್ತದೆ ಎಂದು ಪ್ರತಿಪಾದಿಸಿದರು.ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಬೇಕೆಂದು ಹಾರೈಸಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಸೋತ ವರು ದೃತಿಗೆಡದೆ ಮುಂದೆ ಅವಕಾಶ ಬರುತ್ತದೆ ಎಂಬ ಸಂಕಲ್ಪದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಂಘದ ಅಧ್ಯಕ್ಷೆ ತಸ್ಸೀಮಾ ಭಾನು, ಪ್ರಾಂಶುಪಾಲ ರುದ್ರಯ್ಯ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ವಿಜಯಕುಮಾರ್ ಸ್ವಾಗತಿಸಿ, ಶೃತಿ ನಿರೂಪಿಸಿ, ಲತಾಮಣಿ ವಂದಿಸಿದರು.--ಬಾಕ್ಸ್--
ಜಿಲ್ಲಾ ಮಟ್ಟದ ಕ್ರೀಡಾಕೂಟಸೆ.13, 14 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡುತ್ತಿದ್ದು, ಸೆ.13 ರಂದು ಇದೇ ಆಟದ ಮೈದಾನದಲ್ಲಿ ಹಾಗೂ ಸೆ.14 ರಂದು ರಾಮನಹಳ್ಳಿಯ ಪೊಲೀಸ್ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಇಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
23 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಉದ್ಘಾಟಿಸಿದರು. ಪಿಯು ಡಿಡಿ ಪುಟ್ಟಾನಾಯ್ಕ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ನಾಗರಾಜ್‌ರಾವ್ ಕಲ್ಕಟ್ಟೆ ಇದ್ದರು.