ಸಾರಾಂಶ
-ಬಾಲಕಾರ್ಮಿಕ ಯೋಜನಾಧಿಕಾರಿಯಿಂದ ಕಾರ್ಖಾನೆ ವಿರುದ್ಧ ದೂರು ದಾಖಲು । 14 ವರ್ಷದ ಮಕ್ಕಳ ಬಳಕೆ: ರಾಸಾಯನಿಕ ತಗುಲಿ ಮಕ್ಕಳಿಗೆ ಗಂಭೀರ ಗಾಯ
-ಕನ್ನಡಪ್ರಭ ಸರಣಿ ವರದಿ ಭಾಗ : 32ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಯೊಂದರಲ್ಲಿ ಮಕ್ಕಳ ಬಳಕೆ ಹಾಗೂ ಅಪಾಯಕಾರಿ ರಾಸಾಯನಿಕ ತಗುಲಿ ಸುಟ್ಟ ಗಾಯಗಳು ಹಾಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾರಣದಿಂದಾಗಿ ಬಾಲ-ಕಿಶೋರ ಕಾರ್ಮಿಕ ನಿಷೇಧ ಕಾಯ್ದೆಯಡಿ ಕಂಪನಿ ವಿರುದ್ಧ ದೂರು ದಾಖಲಾಗಿದೆ.
ಕಂಪನಿ ಸಮೀಪದ ತಾಂಡಾವೊಂದರ ಐವರನ್ನು 450 ರು.ಗಳಂತೆ ದಿನಗೂಲಿ ಆಧಾರದ ಮೇಲೆ ಗುತ್ತಿಗೆದಾರ ಕೆಲಸಕ್ಕೆ ಕರೆತಂದಿದ್ದ. ಈ ಐವರಲ್ಲಿ ಮೂವರು 14 ವರ್ಷ ಮೇಲ್ಪಟ್ಟ ಹಾಗೂ 17 ವರ್ಷದೊಳಗಿನ ಕಿಶೋರ ಬಾಲಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಕಂಪನಿ ಪ್ರದೇಶದಲ್ಲಿನ ಅಪಾಯಕಾರಿ ರಾಸಾಯನಿಕ ಪೌಡರ್ ಸಾಗಿಸುವ ವೇಳೆ ಅವರ ಮೇಲೆ ಪೌಡರ್ ಬಿದ್ದ ಪರಿಣಾಮ ನಿಧಾನಗತಿಯಲ್ಲಿ ಅವರ ಕೈ-ಕಾಲುಗಳು, ಮೈಮೇಲಿನ ಚರ್ಮಕ್ಕೆ ಸುಟ್ಟ ಗಾಯಗಳುಂಟಾಗಿ, ದಿನೇ ದಿನೇ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆಯೇ ಕಂಪನಿಗೆ ಮೊರೆ ಹೋದರೆ, ಚಿಕಿತ್ಸೆ ನೀಡಿಸಬೇಕಾದ ಕಂಪನಿ ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಿತ್ತು.ಕಂಪನಿಯ ನಿಷ್ಕಾಳಜಿ ಖಂಡಿಸಿ, ಮಕ್ಕಳು ಸೇರಿದಂತೆ ಕೆಲವು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕಾರ್ಖಾನೆಯದುರು ಧರಣಿಗೆ ಮುಂದಾದಾಗ, ಮಾಧ್ಯಮಗಳ ಮೂಲಕ ತಮ್ಮ ಬಂಡಾವಳ ಮತ್ತೆಲ್ಲಿ ಬಯಲಾಗುತ್ತದೋ ಎಂದರಿತ ಕಂಪನಿ, ಮನವೊಲೈಸುವ ಪ್ರಯತ್ನ ನಡೆಸಿತ್ತು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿತ್ತು.
ಈ ಸುದ್ದಿ ಬಹಿರಂಗವಾಗಿದ್ದೇ ತಡ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ರಿಯಾಜ್ ಪಟೇಲ್ ನೇತೃತ್ವದ ತಂಡ, ಮಕ್ಕಳನ್ನು ಭೇಟಿ ಮಾಡಿ, ದಾಖಲೆಗಳ ಪ್ರಕಾರ ಅವರವರ ವಯೋಮಿತಿ, ಅಲ್ಲಿನ ವಾಸ್ತವತೆಯ ವೀಕ್ಷಿಸಿ, ಮಕ್ಕಳಿಗಾದ ಗಾಯ, ಅವರ ಚಿಕಿತ್ಸೆಯಲ್ಲಿ ಕಂಪನಿ ವಹಿಸಿದ ನಿರ್ಲಕ್ಷ್ಯತೆಯನ್ನು ಗಂಭೀರವಾಗಿ ಪರಿಗಣಿಸಿ, ವಿವರವಾದ ಮಾಹಿತಿಗಳ ದಾಖಲೆಗಳೊಂದಿಗೆ ಸೈದಾಪುರ ಪೊಲೀಸ್ ಠಾಣೆಗೆ ತೆರಳಿ ಶುಕ್ರವಾರ ಸಂಜೆ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ.===ಬಾಕ್ಸ್===
* ಪರಿಸ್ಥಿತಿ ಹದಗೆಡಲು ಸ್ಥಳೀಯ ಮಧ್ಯವರ್ತಿಗಳೂ ಕಾರಣ..?
ಕೆಮಿಕಲ್ ಕಂಪನಿ ವಿರುದ್ಧ ಇಂತಹುದ್ದೊಂದು ದೂರು ನೀಡದಂತೆ ಸ್ಥಳೀಯ ಕೆಲವು ಪ್ರಭಾವಿಗಳು ಹಾಗೂ ಮಧ್ಯವರ್ತಿಗಳು ಕಳೆದೊಂದು ವಾರದಿಂದ ನಿರಂತರ ಪ್ರಯತ್ನಿಕ್ಕಿಳಿದಿತ್ತು ಎನ್ನಲಾಗುತ್ತಿದೆ.ಅಪಾಯಕಾರಿ ರಾಸಾಯನಿಕ ಬಳಕೆಯಿಂದ ಗಾಯಗೊಂಡ ಮಕ್ಕಳಿಗೆ ದೊಡ್ಡಾಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಖರ್ಚಿಗೆಂದು 20 ಸಾವಿರ ರು.ಗಳ ಹಣದ ಆಮಿಷವೊಡ್ಡುವ, ತಾವ್ಯಾರೂ ದೂರು ನೀಡದಂತೆ ತಮ್ಮ ಕುಟುಂಬಸ್ಥರನ್ನು ಬೆದರಿಸುವ ತಂತ್ರವೂ ನಡೆದಿದೆ ಎಂದು "ಕನ್ನಡಪ್ರಭ "ದೆದುರು ನೋವು ತೋಡಿಕೊಂಡ ಕಿಶೋರ ವಯಸ್ಸಿನ ಬಾಲಕನೊಬ್ಬ, ಕೂಲಿ ಕಾರ್ಮಿಕರನ್ನು ಕರೆದೊಯ್ಯುವ ಗುತ್ತಿಗೆದಾರರು ತಮ್ಮನ್ನು ಓಲೈಸುವ, ಬೆದರಿಸುವ ಯತ್ನವನ್ನೂ ನಡೆಸಿದ್ದರು. ಕಂಪನಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ, ಮನೆಯಲ್ಲಿ ಕೆಲಸ ಮಾಡುವಾಗ ಗ್ಯಾಸ್ ಸ್ಟೌವ್ ಬೆಂಕಿಯಿಂದಾದ ಗಾಯಗಳು ಎಂದು ಅಧಿಕಾರಿಗಳೆದುರು- ಮಾಧ್ಯಮಗಳೆದುರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆಂದು ಆತ ಆತಂಕ ವ್ಯಕ್ತಪಡಿಸಿದ.
ಇದೊಂದೇ ಅಲ್ಲ, ಇಲ್ಲಿನ ಹಲವಾರು ಕಂಪನಿಗಳಲ್ಲಿ ಕೆಲಸಕ್ಕೆ ಎಳೆಯ ಮಕ್ಕಳನ್ನು, ಕಿಶೋರ ಬಾಲಕರನ್ನು ಬಳಸಿಕೊಳ್ಳಲಾಗುತ್ತಿದೆ. ಇವ್ಯಾವೂ ಬಹಿರಂಗ ಆಗೋಲ್ಲ. ದಿನಕ್ಕೆ 450 ರು.ಗಳ ಕೂಲಿ ನೀಡುತ್ತಾರೆ. ವಾರಕ್ಕೊಮ್ಮೆ ಹಣ ಕೈಗೆ ಸಿಗುತ್ತದೆ. ಮಧ್ಯವರ್ತಿ ಅಥವಾ ಗುತ್ತಿಗೆದಾರ ಮೂಲಕ ನಮ್ಮನ್ನು ಆಟೋಗಳಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ಯುತ್ತಾರೆ ಎಂದೆನ್ನುವ ಮತ್ತೋರ್ವ ಬಾಲಕ, ಏನಾದರೂ ಹೆಚ್ಚುಕಮ್ಮೀಯಾದರೆ ನಮ್ಮನ್ನು ಕರೆದುಕೊಂಡು ಬರುವ ಗುತ್ತಿಗೆದಾರನೇ ಜವಾಬ್ದಾರಿ ಪಡೆಯಬೇಕೆಂದು ಕಂಪನಿಯವರು ಆತನಿಗೆ ಮೊದಲೇ ತಿಳಿಸುತ್ತಾರಾದ್ದರಿಂದ, ನಮ್ಮ ಇರುವಿಕೆ, ದಾಖಲೆ, ನಮ್ಮ ಹೆಸರು ವಯಸ್ಸಿನ ಕುರಿತು ಇಲ್ಲಿನನೇಕ ಕಾರ್ಖಾನೆಗಳಲ್ಲಿ ಲೆಕ್ಕವೇ ಇಡೋಲ್ಲ ಎಂದು ಅಲ್ಲಿನ ಗುಟ್ಟು ರಟ್ಟು ಮಾಡುತ್ತಾರೆ. ಪರಿಸ್ಥಿತಿ ಹದಗೆಡಲು, ಅಪಾಯಕಾರಿ ಕಾರ್ಖಾನೆಗಳ ನಿಜಾಂಶ ಗೊತ್ತಿದ್ದರೂ, ತಮ್ಮಗಳ ಲಾಭಕ್ಕಾಗಿ ಕಾರ್ಖಾನೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಸ್ಥಳೀಯ ಕೆಲವು ಮಧ್ಯವರ್ತಿಗಳೂ ಕಾರಣ ಅನ್ನೋದು ಇಲ್ಲನವರ ಅಂಬೋಣ.ಕಾರ್ಖಾನೆಗಳಲ್ಲಿನ ಕಾರ್ಮಿಕರ ಸ್ಥಿತಿಗತಿ, ಮಕ್ಕಳ ಬಳಕೆ, ಉತ್ತರ ಭಾರತ ಹಾಗೂ ವಿವಿಧೆಡೆಯಿಂದ ಬರುವ ಕಾರ್ಮಿಕರ ಮಾಹಿತಿ, ಪ್ರತಿಯೊಂದನ್ನು ಇಲ್ಲಿನ ಕಾರ್ಖಾನೆಗಳು ಮುಚ್ಚಿಡುತ್ತಿವೆ. ಕಾಲಕಾಲಕ್ಕೆ ಇದ ತಪಾಸಿಸಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾಗದದಲ್ಲೇ ಪರಿಶೀಲನಾ ಶಾಸ್ತ್ರ ಪೂರೈಸಿ, ತಣ್ಣಗೆ ಕುಳಿತಿದ್ದಾರೆ. ಇಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರ ವೈಯುಕ್ತಿಕ ಮಾಹಿತಿ, ವಯೋಮಿತಿ, ಕೌಟುಂಬಿಕ ಹಾಗೂ ಆಯಾ ರಾಜ್ಯಗಳಲ್ಲಿ ಅಪರಾಧ ಹಿನ್ನೆಲೆ ಮುಂತಾದವುಗಳ ಬಗ್ಗೆ ಕೂಲಂಕುಷ ಪರಿಶೀಲಿಸಬೇಕು. ಕಂಪನಿಗಳು ಕೊಡುವ ಕಾರ್ಮಿಕರ ಹೆಸರಿನ ಪಟ್ಟಿಗೂ, ವಾಸ್ತವದಲ್ಲಿ ಅಲ್ಲಿ ಕೆಲಸ ಮಾಡುತ್ತಿರುವವರೂ ತಾಳೆಯಾಗುತ್ತಾರೆಯೇ ? ಕಾಯ್ದೆ ಪ್ರಕಾರ ಅವರಿಗೆ ಎಲ್ಲ ಸೌಕರ್ಯಗಳ ನೀಡಲಾಗುತ್ತಿದೆಯೇ ಎಂಬುದರ ಲೆಕ್ಕ ಪಕ್ಕವಾಗಿರಬೇಕು. ಆದರೆ, ಕಂಪನಿಗಳ "ಕೈ "ಚೆಳಕಕ್ಕೆ ಅಧಿಕಾರಿ ವರ್ಗ ಕೂತಲ್ಲೇ ಲೆಕ್ಕ ಚುಕ್ತಾ ಮಾಡಿ ಮೌನಕ್ಕ ಶರಣಾಗುತ್ತಿರುವುದು ಅನುಮಾನ ಮೂಡಿಸಿದೆ ಎಂಬ ಆರೋಪಗಳ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ ಅಧಿಕಾರಿಗಳ ಕಾರ್ಯವೈಖರಿ ಅನುಮಾನಿಸುವಂತಿತ್ತು.
----9ವೈಡಿಆರ್1 : ಸೈದಾಪುರ ಪೊಲೀಸ್ ಠಾಣೆಯ ಹೊರನೋಟ.
9ವೈಡಿಆರ್2 : ಕನ್ನಡಪ್ರಭ ಪ್ರಕಟಿಸಿದ ವರದಿ.