ಸಾರಾಂಶ
ಹೆಚ್ಚು ಕಂದಾಯ ಕಟ್ಟುವ ವಾರ್ಡ್ ಗೆ ಸೌಲಭ್ಯಗಳನ್ನೇ ನೀಡದಿದ್ದರೆ ನಾವು ಚುನಾವಣೆಯಲ್ಲಿ ಗೆದ್ದು ಏನು ಪ್ರಯೋಜನ? ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಾರ್ಡ್ ನ ನಾಗರಿಕರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದು, ಕೂಡಲೇ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿ ಅನುಕೂಲತೆ ಮಾಡಿಕೊಡಬೇಕು.
ಕನ್ನಡಪ್ರಭ ವಾರ್ತೆ ಮಾಗಡಿ
ವರ್ಷಗಳು ಕಳೆದರೂ ನಗರೋತ್ಥಾನ ಹಂತ-4ರ ಅಡಿ 20ನೇ ವಾರ್ಡ್ ನ ಅಗ್ರಹಾರ ಬೀದಿಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸದೇ ವಾರ್ಡ್ ನ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಕೆ.ವಿ.ಬಾಲು ಆರೋಪಿಸಿದರು.ಪಟ್ಟಣದ ಪುರಸಭೆಯ ಅಗ್ರಹಾರ ಬೀದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭಾ ಅಧಿಕಾರಿಗಳು ವಾರ್ಡ್ ಗಳಿಗೆ ಭೇಟಿ ನೀಡಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಲ್ಲಿನ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಅಗ್ರಹಾರ ಬೀದಿಯಲ್ಲಿ ಎರಡು ಕಡೆ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಯು ನಡೆದಿದ್ದು, ಸದರಿ ಕಾಮಗಾರಿಯಲ್ಲಿ 1 ಕಡೆ ಚರಂಡಿ ನಿರ್ಮಿಸಿ ಕವರಿಂಗ್ ಸ್ಲ್ಯಾಬ್ ಅಳವಡಿಸಿರುವುದನ್ನು ಬಿಟ್ಟರೆ ಮತ್ತೊಂದು ಬದಿಯಲ್ಲಿ ಚರಂಡಿ ರಸ್ತೆ ನಿರ್ಮಾಣ ಮಾಡಿರುವುದಿಲ್ಲ, ಇದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗಿರುತ್ತಿದೆ.
ಅಗ್ರಹಾರ ಬೀದಿಯ ನಾಗರಿಕರು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನನಗೆ ದೂರು, ಮನವಿ ಸಲ್ಲಿಸಿದ್ದಾರೆ. ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗಿಂತಲೂ ಅತಿ ಹೆಚ್ಚು ಕಂದಾಯ ನಮ್ಮ ವಾರ್ಡ್ ನಿಂದಲೇ ಸಂದಾಯವಾಗುತ್ತದೆ. ಹೆಚ್ಚು ಕಂದಾಯ ಕಟ್ಟುವ ವಾರ್ಡ್ ಗೆ ಸೌಲಭ್ಯಗಳನ್ನೇ ನೀಡದಿದ್ದರೆ ನಾವು ಚುನಾವಣೆಯಲ್ಲಿ ಗೆದ್ದು ಏನು ಪ್ರಯೋಜನ? ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಾರ್ಡ್ ನ ನಾಗರಿಕರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದು, ಕೂಡಲೇ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿ ಅನುಕೂಲತೆ ಮಾಡಿಕೊಡಬೇಕು. ಇಲ್ಲವಾದರೆ ನಗರೋತ್ಥಾನದಡಿ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಹಣ ಬಿಡುಗಡೆಗೊಳಿಸಬಾರದೆಂದು ಜಿಲ್ಲಾಧಿಕಾರಿಗಳು ಹಾಗೂ ಪುರಸಭೆ ಪಿಡಿಯವರಿಗೆ ದೂರು ನೀಡುವುದಾಗಿ ತಿಳಿಸಿದರು. ವಾರ್ಡ್ ನ ನಾಗರಿಕರು ಭಾಗವಹಿಸಿದ್ದರು.