ರೈತರ ಸಂಪೂರ್ಣ ಸಾಲಮನ್ನಾ ಮಾಡಲಿ

| Published : Dec 28 2023, 01:46 AM IST

ಸಾರಾಂಶ

ರಾಜ್ಯ ಸರ್ಕಾರ ಬರಗಾಲ ಪರಿಹಾರ ಬಿಡಿಗಾಸು ಕೊಡುತ್ತಿದ್ದಾರೆ. ಎಕರೆಗೆ ಬರೀ ₹೨ ಸಾವಿರ ಪರಿಹಾರ ನೀಡುತ್ತಿದ್ದಾರೆ. ಒಂದು ಎಕರೆಗೆ ರೈತರು ಖರ್ಚು ಮಾಡುವುದು ₹೩೨ ಸಾವಿರ.

ಹೊಸಪೇಟೆ: ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಸರ್ಕಾರಗಳನ್ನು ಒತ್ತಾಯಿಸಿದರು.

ನಗರದ ಒಳಾಂಗಣ ಕ್ರೀಡಾ ಸಭಾಂಗಣದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ ವಿಜಯನಗರ ಜಿಲ್ಲಾ ರೈತರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಬರಗಾಲ ಪರಿಹಾರ ಬಿಡಿಗಾಸು ಕೊಡುತ್ತಿದ್ದಾರೆ. ಎಕರೆಗೆ ಬರೀ ₹೨ ಸಾವಿರ ಪರಿಹಾರ ನೀಡುತ್ತಿದ್ದಾರೆ. ಒಂದು ಎಕರೆಗೆ ರೈತರು ಖರ್ಚು ಮಾಡುವುದು ₹೩೨ ಸಾವಿರ. ಆದರೆ ಸರ್ಕಾರ ಬರೀ ಎಕರೆಗೆ ಎರಡು ಸಾವಿರ ರು. ನೀಡುತ್ತಿದ್ದಾರೆ ಎಂದು ದೂರಿದ ಅವರು, ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ಮುಂದಿನ ಬಜೆಟ್ ರೈತರ ಪರ ಬಜೆಟ್ ಆಗಿರಬೇಕು. ಸಿಎಂ ಸಿದ್ದರಾಮಯ್ಯನವರು ರೈತರ ಪರವಾದ ಬಜೆಟ್ ಮಂಡಿಸಬೇಕು ಎಂದರು. ತುಂಗಭದ್ರಾ ಜಲಾಶಯದಲ್ಲಿ ೩೩ ಟಿಎಂಸಿಯಷ್ಟು ಹೂಳು ತುಂಬಿದ್ದು, ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹೧೦ ಸಾವಿರ ಕೋಟಿ ಮೀಸಲಿಡಬೇಕು. ಆಲಮಟ್ಟಿ ಜಲಾಶಯ ಎತ್ತರಿಸಬೇಕು. ಈಗಾಗಲೇ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ಸಮನಾಂತರ ಜಲಾಶಯಕ್ಕೆ ಡಿಪಿಆರ್‌ಗೆ ₹1 ಸಾವಿರ ಕೋಟಿ ಮೀಸಲಿಟ್ಟಿವೆ. ಕರ್ನಾಟಕಕ್ಕೆ ಶೇ. ೬೦ರಷ್ಟು ಹಾಗೂ ಆಂಧ್ರಪ್ರದೇಶಕ್ಕೆ ಶೇ. ೪೦ರಷ್ಟು ನೀರಿನ ಪಾಲು ಲಭ್ಯವಾಗಲಿದೆ. ಕೂಡಲೇ ರಾಜ್ಯ ಸರ್ಕಾರ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ರೈತರು ಕಷ್ಟದಲ್ಲಿದ್ದಾರೆ. ರೈತರನ್ನು ಜಾತಿಯಿಂದ ನೋಡಬಾರದು. ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯ ಆಗಬೇಕು. ಪೋಷಕಾಂಶವುಳ್ಳ ಬೆಳೆ ಬೆಳೆಯಬೇಕು. ಈಗ ಗಲ್ಲಿ ಗಲ್ಲಿಗಳಲ್ಲಿ ಕ್ಯಾನ್ಸರ್ ಪೀಡಿತರು ಸಿಗುತ್ತಿದ್ದಾರೆ. ನಾವು ಪೋಷಕಾಂಶವುಳ್ಳ, ಶಕ್ತಿಯುತ ಆಹಾರ ಬೆಳೆಯಬೇಕು. ಇದಕ್ಕಾಗಿ ಸಂವಾದ, ಕಾರ್ಯಾಗಾರಗಳನ್ನು ನಡೆಸಬೇಕು. ಲಿಂ. ಸಂಗನ ಬಸವ ಸ್ವಾಮೀಜಿಯವರು ಇದನ್ನೆ ಬಯಸಿದ್ದರು. ಕೊಟ್ಟೂರುಸ್ವಾಮಿ ಮಠ ಯಾವತ್ತೂ ರೈತರ ಪರ ನಿಲ್ಲಲಿದೆ ಎಂದರು.ಕಾಂಗ್ರೆಸ್ ಮುಖಂಡ ಎಚ್‌ಎನ್‌ಎಫ್ ಇಮಾಮ್ ನಿಯಾಜಿ ಮಾತನಾಡಿ, ರೈತರು ಫಸಲು ಬೆಳೆಯದಿದ್ದರೆ, ಜಗತ್ತು ಉಳಿಯುವುದಿಲ್ಲ. ನಾವೆಲ್ಲರೂ ಮೊದಲು ರೈತರನ್ನು ಗೌರವದಿಂದ ಕಾಣಬೇಕು ಎಂದರು.

ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಪ್ರಭುದೇಶೀಕ ಸ್ವಾಮೀಜಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ಮುಖಂಡರಾದ ಹೊನ್ನೂರವಲಿ, ವೆಂಕೋಬಣ್ಣ, ಸರಳಾ ಕಾವ್ಯ, ಪ್ರಕಾಶ ಮತ್ತಿತರರಿದ್ದರು. ಸಾಧಕ ರೈತರು, ಎಸ್ಸೆಸ್ಸೆಲ್ಸಿ, ಪಿಯುಸಿಯಲಿ ಅತಿ ಹೆಚ್ಚು ಅಂಕಗಳಿಸಿದ ರೈತರ ಮಕ್ಕಳನ್ನು ಸನ್ಮಾನಿಸಲಾಯಿತು.ಭವ್ಯ ಮೆರವಣಿಗೆ: ನಗರದ ವಡಕರಾಯ ದೇವಸ್ಥಾನದಿಂದ ರೈತರ ಭವ್ಯ ಮೆರವಣಿಗೆ ನಡೆಯಿತು. ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು. ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು. ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಒಳಾಂಗಣ ಕ್ರೀಡಾಂಗಣ ತಲುಪಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ೧೧ ಜೋಡಿ ಎತ್ತಿನ ಬಂಡಿಗಳಲ್ಲಿ ರೈತರು ಮೆರವಣಿಗೆಯಲ್ಲಿ ಸಾಗಿ ಬಂದರು. ಜಾನಪದ ವಿವಿಧ ಕಲಾ ತಂಡಗಳು ಕೂಡ ಇದ್ದವು.