18ರಂದು ಬೈಲಹೊಂಗಲ-ಕಿತ್ತೂರು ಸಂಪೂರ್ಣ ಬಂದ್‌

| Published : Mar 14 2025, 12:32 AM IST

ಸಾರಾಂಶ

ಪ್ರಸಕ್ತ ಬಜೆಟ್‌ನಲ್ಲಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ನೀಡಿಲ್ಲ. ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಮಾ.18ರಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕು ಸಂಪೂರ್ಣ ಬಂದ್‌ಗೆ ಕರೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ, ವೀರರಾಣಿ ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರವನ್ನು ಕಳೆದ 17 ವರ್ಷಗಳ ಹಿಂದೆ ಸ್ಥಾಪಿಸಿದ್ದು ಕೇವಲ ಇಲ್ಲಿಯವರೆಗೆ ಅಂದಾಜು ₹49 ಕೋಟಿ ಮಾತ್ರ ಬಿಡುಗಡೆಯಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ನೀಡಿಲ್ಲ. ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಮಾ.18ರಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕು ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ. ನಾಡಿನ ಜನತೆ ಸಾಗರೋಪಾದಿಯಲ್ಲಿ ಬೆಂಬಲ ವ್ಯಕ್ತಪಡಿಸಬೇಕೆಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬೈಲಹೊಂಗಲ ಬಂದ್ ಕರೆಯುವ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಕಿತ್ತೂರು ಪ್ರಾಧಿಕಾರ ಅಭಿವೃದ್ಧಿಗೆ ಯಾವುದೇ ಅನುದಾನ ಘೋಷಣೆ ಮಾಡದಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರಿಸಿದರು.ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರಮಾತೆ ಕಿತ್ತೂರು ಚನ್ನಮ್ಮಾಜಿ ಒಬ್ಬ ದಿಟ್ಟ ಹೋರಾಟಗಾರ್ತಿ. ಬ್ರಿಟಿಷರಿಗೆ ನಡುಕ ಹುಟ್ಟಿಸಿ ಸೋಲಿನ ರುಚಿ ತೋರಿಸಿದ ಮೊಟ್ಟ ಮೊದಲ ಸಾಮ್ರಾಜ್ಯದ ರಾಣಿ. ಅಂತಹ ಧೀರ ಮಹಿಳೆ ಜನ್ಮಭೂಮಿ ಕಾಕತಿ, ಕರ್ಮಭೂಮಿ ಕಿತ್ತೂರು, ಐಕ್ಯಭೂಮಿ ಬೈಲಹೊಂಗಲ ಸೇರಿದಂತೆ 30 ಸ್ಥಳಗಳ ಅಭಿವೃದ್ಧಿಗಾಗಿ 17 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಕಿತ್ತೂರು ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ₹43 ಕೋಟಿ 75 ಲಕ್ಷ ಅನುದಾನ ನೀಡಲಾಗಿದ್ದು, 9 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಸಂಗೊಳ್ಳಿ ಪ್ರಾಧಿಕಾರಕ್ಕೆ ₹350 ಕೋಟಿ ಅನುದಾನ ನೀಡುವುದರ ಮೂಲಕ ರಾಜ್ಯ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ದೂರಿದ್ದಾರೆ.

ಜನ್ಮಭೂಮಿ ಕಾಕತಿಯಲ್ಲಿ ಚನ್ನಮ್ಮಾಜಿ ಅವರ ಮೂರ್ತಿ ಹೊರತು ಪಡಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿಲ್ಲ. ಕರ್ಮಭೂಮಿ ಕಿತ್ತೂರಿನಲ್ಲಿ ಉತ್ಸವದ ಹೊರತು ಕೋಟೆಯ ರಕ್ಷಣೆ, ಅಭಿವೃದ್ಧಿಯಾಗಿಲ್ಲ. ಐಕ್ಯಭೂಮಿ ಬೈಲಹೊಂಗಲದಲ್ಲಿ 10 ವರ್ಷಗಳಿಂದ ಕಾಮಗಾರಿ ಆಮೆ ನಡಿಗೆಯಲ್ಲಿ ನಡೆಯುತ್ತಿರುವುದು ಚನ್ನಮ್ಮಾಜಿ ಅವರಿಗೆ ಅಗೌರವ ತೋರಿದಂತೆ ಎಂದು ತಿಳಿಸಿದ ಶ್ರೀಗಳು, ತಕ್ಷಣ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹200 ಕೋಟಿ ಅನುದಾನ ನೀಡಬೇಕು. ಬೈಲಹೊಂಗಲದಲ್ಲಿ ಅಂತಾರಾಷ್ಟ್ರೀಯ ಬಾಲಕಿಯರ ಸೈನಿಕ ಶಾಲೆ ತೆರೆಯಬೇಕು. ಕಿತ್ತೂರು, ಬೈಲಹೊಂಗಲದಲ್ಲಿ ಕನಿಷ್ಠ ನೂರು ಕೋಟಿ ಅನುದಾನದಲ್ಲಿ ರಾಕ್ ಗಾರ್ಡನ್ ನಿರ್ಮಿಸಬೇಕು. ಪ್ರಾಧಿಕಾರದಲ್ಲಿ ತಿಳಿಸಿರುವ ಸ್ಥಳಗಳಾದ ಮರಡಿದಿಬ್ಬ, ಕಲ್ಮಠ, ನಿಚ್ಚನಕಿ ಸೇರಿದಂತೆ 30 ಸ್ಥಳಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುಬೇಕು. ರಾಜ್ಯ ಸರಕಾರ ವೀರರ ಹೆಸರಿನಲ್ಲಿ ಮಲತಾಯಿ ಧೋರಣೆ ತೋರಬಾರದು ಒಂದು ವೇಳೆ ತೋರಿದರೆ ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಎದುರಿಸುವುದು ಶತಸಿದ್ದ ಎಂದರು.

ಹೀಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಭಾಗದ ಮಠಾಧೀಶರ ನೇತೃತ್ವ ಹಾಗೂ ಚನ್ನಮ್ಮಾಜಿ ಅಭಿಮಾನಿಗಳ ಸಹಕಾರದೊಂದಿಗೆ ಮಾ.18 ರಂದು ಕಿತ್ತೂರು ಹಾಗೂ ಬೈಲಹೊಂಗಲ ಬಂದ್ ಕರೆಯಲಾಗಿದೆ. ಬಂದ್ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ಅನುದಾನದ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ರಾಯಣ್ಣನವರನ್ನು ನಾವೆಲ್ಲರೂ ಗೌರವಿಸುತ್ತೇವೆ, ಸಂಗೊಳ್ಳಿ ಪ್ರಾಧಿಕಾರಕ್ಕೆ ಈಗಾಗಲೇ ಸಾಕಷ್ಟು ಅನುದಾನ ನೀಡಿದ್ದಾರೆ. ಅದರಂತೆಯೇ ಕಿತ್ತೂರು ಪ್ರಾಧಿಕಾರದ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನದ ವಿಷಯದಲ್ಲಿ ಜಾತಿಯತೆ ಮಾಡುವುದಿಲ್ಲ ಎಂಬುದನ್ನು ನಿರೂಪಿಸಬೇಕಿದೆ ಎಂದರು. ಪಂಚಮಸಾಲಿ ಸಮಾಜದ ಅಧ್ಯಕ್ಷ, ಶ್ರೀಶೈಲ ಬೋಳನ್ನವರ, ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ, ಎಫ್.ಎಸ್. ಸಿದ್ದನಗೌಡರ, ಬಿ.ಎಂ.ಚಿಕ್ಕನಗೌಡರ ಬಂದ್ ಯಶಸ್ಸಿಗೆ ಸಲಹೆ ನೀಡಿದರು.

ಪಾದಯಾತ್ರೆಯ ಮೂಲಕ ಸಾಗಿ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮಹಾಂತಯ್ಯ ಆರಾದ್ರಿಮಠ, ಬಸವರಾಜ ಜನ್ಮಟ್ಟಿ, ಚನ್ನಮ್ಮಾಜಿ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೆಪ್ಪ ಗುಂಡ್ಲೂರು, ನ್ಯಾಯವಾದಿ ಎಂ.ವೈ.ಸೋಮಣ್ಣವರ, ಎಸ್.ಎಪ್.ಕಾಡಣ್ಣವರ, ಮಡಿವಾಳಪ್ಪ ಹೋಟಿ, ಗುರು ಮೆಟಗುಡ್ಡ, ಮಹಾಬಳೇಶ್ವರ ಬೋಳನ್ನವರ, ಚಂದ್ರಶೇಖರ ಕೊಪ್ಪದ, ಗಂಗಪ್ಪ ಗುಗ್ಗರಿ, ನಿಂಗಪ್ಪ ಚೌಡನ್ನವರ ಸೇರಿದಂತೆ ಚನ್ನಮ್ಮಾಜಿ ಅಭಿಮಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾಧಿಕಾರಗಳ ಅಭಿವೃದ್ಧಿ ವಿಚಾರದಲ್ಲಿ ಸಂಗೊಳ್ಳಿ ಪ್ರಾಧಿಕಾರದ ಅಭಿವೃದ್ಧಿ ಕಂಡು ಚನ್ನಮ್ಮಾಜಿ ನಗುತ್ತಿದ್ದಾಳೆ. ಆದರೆ ಕಿತ್ತೂರು ಪ್ರಾಧಿಕಾರ ಅಭಿವೃದ್ಧಿಯಾಗದೆ ಇರುವುದನ್ನು ಕಂಡು ರಾಯಣ್ಣ ಅಳುತ್ತಿದ್ದಾನೆ. ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಕಿತ್ತೂರು ಕಲ್ಮಠ