ಒಂಟಿ ಬಂಟಿ ಸಿನಿಮಾಕ್ಕೆ ಕಂಪ್ಲಿಯ ಶ್ರೀಹರಿ ಸಂಗೀತ

| Published : Jan 05 2024, 01:45 AM IST

ಸಾರಾಂಶ

ಎಸ್. ಶ್ರೀಹರಿ ಅವರು “ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ’’ ಎಂಬ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಕಂಪ್ಲಿ: ಸ್ಥಳೀಯ ಕಲಾವಿದ ಎಸ್. ಶ್ರೀಹರಿ ಸಂಗೀತ ನಿರ್ದೇಶನದ ಒಂಟಿ ಬಂಟಿ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಯುವಕನ ಸಾಧನೆಗೆ ಪಟ್ಟಣದ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೋಟೆಲ್ ಉದ್ಯಮಿ ರಾಧಾಕೃಷ್ಣ ಶೆಟ್ಟಿ ಹಾಗೂ ವನಜಾಕ್ಷಿ ದಂಪತಿ ಪುತ್ರ ಎಸ್. ಶ್ರೀಹರಿ ಇಲ್ಲಿನ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿಶಾಲೆಯ ವಿದ್ಯಾರ್ಥಿ. ಎರಡು ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತು ವಿದ್ಯಾಭ್ಯಾಸದ ಕಾರಣ ಸಂಗೀತ ಕಲಿಕೆಯನ್ನು ಮೊಟಕುಗೊಳಿಸಿದರು.

ಲಾಕ್‌ಡೌನ್ ವೇಳೆ ಸಂಗೀತ: ಲಾಕ್‌ಡೌನ್ ಸಂದರ್ಭದಲ್ಲಿ ಯುಟ್ಯೂಬ್‌ ಮೂಲಕ ಸಂಗೀತ ನಿರ್ದೇಶನಕ್ಕೆ ಬೇಕಾಗುವ ತಾಂತ್ರಿಕ ವಿಚಾರಗಳ ಬಗ್ಗೆ ಕಲಿತು ಮಿಡಿ ಕಿ ಬೋರ್ಡ್‌ನಿಂದ ವಾದ್ಯ ನುಡಿಸುವುದನ್ನು ಅಭ್ಯಾಸ ಮಾಡಿದರು. “ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ’’ ಎಂಬ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಸಿದರು.

ಖ್ಯಾತ ಸಂಗೀತಗಾರರಾದ ನವೀನ್ ಸಜ್ಜು, ಸರಿಗಮಪ ಖ್ಯಾತಿಯ ಆಶಾಭಟ್, ಮೆಹೆಬೂಬ್, ಚಾರ್ಲಿ ಸಿನಿಮಾ ಖ್ಯಾತಿಯ ಪಂಚಮ್ ಜೀವ ಸೇರಿದಂತೆ ಅನೇಕ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಅಧಿಪತ್ರ ಹಾಗೂ ಹೊಸಬರ ಕೊಂಡೋಜಿ ಸಿನಿಮಾಗಳು ಇವರದ್ದೇ ಸಂಗೀತ ನಿರ್ದೇಶನದಲ್ಲಿ ಮೂಡಿ ಬರಲಿವೆ.

ಕರಗತ: ಹಾಡುಗಾರಿಕೆ, ವಾದ್ಯ ನುಡಿಸುವುದು, ನಿರ್ದೇಶನ ಸೇರಿದಂತೆ ಯಾವುದೇ ವಿಚಾರದಲ್ಲಾದರೂ ಸರಿ, ಮೊದಲು ಕಲೆ ಕರಗತವಾದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಕಂಪ್ಲಿಯ ಸಂಗೀತ ನಿರ್ದೇಶಕ ಎಸ್. ಶ್ರೀಹರಿ ತಿಳಿಸಿದರು.