ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿಯೇ ನನ್ನ ಆದ್ಯತೆ: ಪದ್ಮರಾಜ್ ಪೂಜಾರಿ

| Published : Apr 23 2024, 12:59 AM IST

ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿಯೇ ನನ್ನ ಆದ್ಯತೆ: ಪದ್ಮರಾಜ್ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದ್ದು ಹೌದು. ಆ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಂತ ನಾನೆಲ್ಲೂ ಜಾತಿ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿಲ್ಲ. ನಾನು ಸ್ಥಾಪನೆ ಮಾಡಿದ ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಆ ಜಾತಿ, ಈ ಜಾತಿ ಎಂದು ನೋಡದೆ ಸಮಾಜದ ಎಲ್ಲ ಅಶಕ್ತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದೇನೆ ಎಂದು ದ.ಕ. ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂದರ್ಶನ: ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

---------

ನೀವು ಗೆದ್ದರೆ ದ.ಕ.ದ ಜನರು ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?

ತುಳುನಾಡು ಅಭಿವೃದ್ಧಿ ಆಗಬೇಕಾದರೆ ಇಲ್ಲಿನ ಸಾಮರಸ್ಯದ ಗತವೈಭವ ಮರುಸ್ಥಾಪನೆ ಮಾಡುವುದು ನನ್ನ ಮೊದಲ ಉದ್ದೇಶ. ಕೈಗಾರಿಕೆಗಳು, ಹೂಡಿಕೆಗಳು ಬರುವಂತೆ ಮಾಡಬೇಕಿದೆ. ಮೆಡಿಕಲ್‌, ಎಜ್ಯುಕೇಶನ್‌, ಟೆಂಪಲ್‌ ಟೂರಿಸಂ, ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಮುಂದಿರಿಸಿ ಟೂರಿಸಂ ಆಗಬೇಕಿದೆ. ಇದುವರೆಗೆ ಈ ಕುರಿತು ಪ್ರಯತ್ನವೇ ನಡೆದಿಲ್ಲ. ಮುಂಬೈ ಮಹಾನಗರ 20 ಗಂಟೆ ಲೈವ್‌ ಆಗಿ ಲವಲವಿಕೆಯಿಂದ ಇರುವಂತೆ ಅದೇ ರೀತಿ ಮಾಡಲು ಅರ್ಹ ನಗರ ಮಂಗಳೂರು. ಆಗ ಇಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ವಿದ್ಯಾವಂತರು ಹೊರ ರಾಜ್ಯ, ದೇಶಗಳಿಗೆ ಹೋಗಿ ದುಡಿಯುವ ಅನಿವಾರ್ಯತೆಗೆ ಪರಿಹಾರವಾಗಿ ಇಲ್ಲೇ ಉದ್ಯೋಗ ಸೃಷ್ಟಿ ಮಾಡೋದು ನನ್ನ ಗುರಿ.

--------

ಬಿಜೆಪಿಯ ಹಿಂದುತ್ವ, ಮೋದಿ ಇತ್ಯಾದಿ ಚುನಾವಣಾ ಕಾರ್ಯತಂತ್ರವನ್ನು ಹೇಗೆ ಎದುರಿಸ್ತಿದೀರಿ?

ನಾನೂ ಹಿಂದೂ ಧರ್ಮದಲ್ಲಿ ಹುಟ್ಟಿದವನು. ಹಿಂದೂ ಧರ್ಮದಲ್ಲಿ ಅಪಾರ ಗೌರವ, ನಂಬಿಕೆಗಳನ್ನು ಇಟ್ಟುಕೊಂಡವನು. ನಮ್ಮ ಧರ್ಮವನ್ನು ಪಾಲನೆ ಮಾಡುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂಬ ಜ್ಞಾನವನ್ನು ಹಿಂದೂ ಧರ್ಮ ನನಗೆ ನೀಡಿದೆ. ಸಾಧ್ಯವಾದಷ್ಟು ಕಡು ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇನೆ. ಇದು ರಾಷ್ಟ್ರ ಭಕ್ತಿ ಅಲ್ವಾ? ಬಿಜೆಪಿಯವರು ಜಾತಿ, ಧರ್ಮ ಹೆಸರಲ್ಲಿ ದ್ವೇಷ ಹರಡಿಸಿ, ಯುವಕರನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಜೈಲಿಗೆ ಹೋಗುವಂತೆ ಮಾಡುವುದು, ಆಸ್ಪತ್ರೆ ಸೇರುವಂತೆ ಅಥವಾ ಕೊಲೆಗೀಡಾಗಿ ಅವರ ಮನೆಯವರನ್ನು ಅನಾಥ ಮಾಡುವುದು ರಾಷ್ಟ್ರಭಕ್ತಿಯಾ ಅಂತ ಕೇಳಲು ಇಚ್ಛಿಸ್ತೇನೆ.

--------ನೀವು ಜಾತಿ ರಾಜಕಾರಣ ಮಾಡ್ತಿದ್ದೀರಿ ಅಂತ ಆರೋಪವಿದೆ, ನೀವೇನು ಹೇಳ್ತೀರಿ?

ಪದ್ಮರಾಜ್‌ ಯಾವತ್ತೂ ಯಾವುದೇ ಜಾತಿ, ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡಿದವನಲ್ಲ. ಆದರೆ ನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದ್ದು ಹೌದು. ಆ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಂತ ನಾನೆಲ್ಲೂ ಜಾತಿ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿಲ್ಲ. ನಾನು ಸ್ಥಾಪನೆ ಮಾಡಿದ ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಆ ಜಾತಿ, ಈ ಜಾತಿ ಎಂದು ನೋಡದೆ ಸಮಾಜದ ಎಲ್ಲ ಅಶಕ್ತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದೇನೆ. ಆದರೆ ಚುನಾವಣೆ ಗೆಲ್ಲುವುದಕ್ಕಾಗಿ ಅಪಪ್ರಚಾರ ಮಾಡೋದು ಬಿಜೆಪಿಯವರ ಚಾಳಿ. ಇದನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ.

---------

ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎನ್ನುತ್ತಿದ್ದೀರಿ, ಏನು ಅಪಪ್ರಚಾರ ಮಾಡುತ್ತಿದೆ?ಪದ್ಮರಾಜ್‌ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಲ್ಲಾದರೂ ಜಾತಿ ಆಧಾರದಲ್ಲಿ ಓಟು ಹಾಕಿ ಅಂತ ಹೇಳಿದ್ದೇನಾ? ಪದ್ಮರಾಜ್‌ ಬಿಲ್ಲವನೇ ಅಲ್ಲ, ಘಟ್ಟದವರು ಎನ್ನುವ ಅಪಪ್ರಚಾರವನ್ನೂ ಮಾಡುತ್ತಿದ್ದಾರೆ. ನಾನು ಶಾಲೆ, ಕಾಲೇಜು ಕಲಿತಿಲ್ವಾ? ಅವರಿಗೆ ಬೇಕಾದರೆ, ನನ್ನ ಯಾವುದಾದರೂ ಸರ್ಟಿಫಿಕೆಟ್‌ ಸ್ಕೂಲ್‌, ಕಾಲೇಜಲ್ಲಿ ಸಿಗಲ್ವಾ? ಇದನ್ನೆಲ್ಲ ಮಾಡೋದು ಅಪಪ್ರಚಾರ ಅಲ್ವಾ? ಕುದ್ರೋಳಿ ದೇವಾಲಯದಲ್ಲಿ 27 ವರ್ಷ ಕೆಲಸ ಮಾಡಿದ್ದೇನೆ. ಇದನ್ನೆಲ್ಲ ಜನರು ನೋಡಿದ್ದಾರೆ. ಉತ್ತರವನ್ನೂ ಕೊಡುತ್ತಾರೆ.

--------ಪೂಜಾರಿ ಅವರ ಶಿಷ್ಯರಾಗಿ ಅವರ ಅನೇಕ ಚುನಾವಣೆ ನೋಡಿದ್ದೀರಿ. ಆಗಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಹೇಗೆ ಭಿನ್ನವಾಗಿದೆ?

ಪೂಜಾರಿ ಕಾಲದಲ್ಲೂ ಬಿಜೆಪಿಯವರ ಅಪಪ್ರಚಾರ ಇತ್ತು. ಈಗಲೂ ಮಾಡುತ್ತಿದ್ದಾರೆ. ಬಿಜೆಪಿಯ ಅಪಪ್ರಚಾರಗಳಿಂದಲೇ ಅವರು ಸೋತದ್ದು. ಅಂದು ಪೂಜಾರಿ ವಿರುದ್ಧ ಅಪಪ್ರಚಾರ ಮಾಡಿದವರೆಲ್ಲ ಇಂದು ಅವರ ಬಳಿ ಹೋಗಿ ಕಾಲು ಹಿಡಿಯುತ್ತಿದ್ದಾರೆ. ಇದು ಯಾಕೆ? ತಾವು ತಪ್ಪು ಮಾಡಿದ್ದೇವೆ ಅಂತ ಅವರಿಗೂ ಗೊತ್ತಾಗಿದೆ. ಪೂಜಾರಿ ಅವರಿಗೆ ಆಗಿರುವ ಸೋಲು ಕ್ಷೇತ್ರದ ಜನರಿಗೆ ಆಗಿರುವ ಸೋಲು. ಈಗ ಬಿಜೆಪಿಯವರು ಪೂಜಾರಿ ಕಾಲು ಹಿಡಿಯಲು ಯಾಕೆ ಬರುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಿದೆ.