ಗದಗ: ರೈತರ ಸಮಗ್ರ ಅಭಿವೃದ್ಧಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸುಧಾರಿತ ಹೈನುಗಾರಿಕೆ ಪರಿಹಾರವಾಗಿದೆ. ಪಶು ಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ತಾಂತ್ರಿಕ ಜ್ಞಾನ ವಿನಿಮಯ ಕೂಡಾ ಅವಶ್ಯಕ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಶನಿವಾರ ತಾಲೂಕಿನ ನಾಗಾವಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗ್ರಾಮ ಗಂಗೋತ್ರಿಯಲ್ಲಿ ಜಿಪಂ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಕರ್ನಾಟಕ ಪಶು ವೈದ್ಯಕೀಯ ಸಂಘ ಹಾಗೂ ಹ್ಯೂಮೇನ್ ವರ್ಲ್ಡ್ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ 2025- 26ನೇ ಸಾಲಿನ ಪಶು ಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ಬೆಳಗಾವಿ ವಿಭಾಗ ಮಟ್ಟದ ತಾಂತ್ರಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪಶುಪಾಲನಾ ಕ್ಷೇತ್ರ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ವೈಜ್ಞಾನಿಕ ಪದ್ಧತಿ, ಹೊಸ ತಂತ್ರಜ್ಞಾನ ಮತ್ತು ಪ್ರಾಣಿ ಕಲ್ಯಾಣದ ಮೌಲ್ಯಗಳನ್ನು ಸಮನ್ವಯಗೊಳಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದೆ. ರಾಜ್ಯದ ಕೋಲಾರ, ಮಂಡ್ಯ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಹೈನುಗಾರಿಕೆ ರೈತರಿಗೆಲ್ಲ ಲಾಭದಾಯಕ ಕಸುಬಾಗಿದೆ. ಅವರಿಗೆ ಸಾಧ್ಯವಾಗಿದ್ದು ಇಲ್ಲಿ ಏಕೆ ಸಾಧ್ಯವಾಗಿಲ್ಲ ಎನ್ನುವುದರ ಕುರಿತು ಇಲ್ಲಿ ಚರ್ಚೆಯಾಗಲಿ ಎಂದರು.

ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕಡಿಮೆಯಾಗಿರುವುದೇ ಗ್ರಾಮೀಣ ಭಾಗದ ಸಂಪತ್ತು ವೃದ್ದಿಯಾಗದಿರಲು ಕಾರಣವಾಗಿದೆ. ದೇಶದ ಸಂಪತ್ತು‌ ವೃದ್ಧಿಯಲ್ಲಿ ಹೈನುಗಾರಿಕೆ ಪ್ರಭಾವ ಬಹುಮುಖ್ಯವಾಗಿದೆ ಇದನ್ನು ಅರಿತು, ತಾಂತ್ರಿಕತೆ ಬಳಸಿ ಅಭಿವೃದ್ಧಿಯಡೆಗೆ ಸಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಲಾಭವಾಗಿಸಲು ತಾಂತ್ರಿಕತೆ ಅಳವಡಿಕೆ ಅನಿವಾರ್ಯವಾಗಿದೆ. ಪ್ರಾಣಿಗಳ ಕೊನೆಗಾಲದಲ್ಲಿ ಕಾಳಜಿ ಮಾಡುವ ಮಾರ್ಗಗಳ ಕುರಿತು ಸಹ ಚರ್ಚೆಯಾಗಿ, ಪರಿಹಾರ ಸಿಗಲಿ ಎಂದು ಆಶಿಸಿದರು. ಪಶು ಸಂಗೋಪನಾ ಇಲಾಖೆ ಅಗತ್ಯವಾದ ಪ್ರಸ್ತಾವನೆಗಳನ್ನು ಶೀಘ್ರವಾಗಿ ನೀಡಿದಲ್ಲಿ ಮುಂದಿನ ಬಜೆಟ್‌ನಲ್ಲಿ ಕೊಡಿಸಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಇಂದು ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಕೇಂದ್ರ ಸರ್ಕಾರ ಸಂಶೋಧನೆಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಅದು ಸರಿಯಾಗಿ ಸದ್ಬಳಕೆ ಆಗಲಿ. ಸಮ್ಮೇಳನದಲ್ಲಿ ಜ್ಞಾನ ತಂತ್ರಜ್ಞಾನ ವಿನಿಮಯವಾಗಿ ಅದು ಸರಿಯಾಗಿ ಅನುಷ್ಠಾನ ಆಗಲಿ. ಕುರಿ, ಕೋಳಿ ಸೇರಿದಂತೆ ಹೈನುಗಾರಿಕೆ ಮೂಲಕ ತಂತ್ರಜ್ಞಾನ ಬಳಸಿ ಹೇಗೆ ಲಾಭದಾಯಕ ಮಾಡಬಹುದು ಎಂಬ ಕುರಿತು ಚರ್ಚೆಯಾಗಲಿ ಎಂದರು.


ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಪಿ. ಶ್ರೀನಿವಾಸ, ವಿಶ್ವವಿದ್ಯಾಲಯದ ಕುಲಪತಿ(ಪ್ರಭಾರ) ಹಾಗೂ ಕುಲಸಚಿವ ಪ್ರೊ. ಡಾ. ಸುರೇಶ್ ವಿ. ನಾಡಗೌಡರ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಸ್.ಜಿ. ಯಲಗೋಡ, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಬಿ. ರಾಮಚಂದ್ರ, ಕೇಂದ್ರ ಸರ್ಕಾರದ ಮಾಜಿ ಪಶು ಸಂಗೋಪನಾ ಆಯುಕ್ತರು ಹಾಗೂ ಬೀದರ ಕೆವಿಎಫ್‌ಎಸ್‌ಯು ಉಪಕುಲಪತಿ ಡಾ. ಸುರೇಶ್ ಎಸ್. ಹೊನ್ನಪ್ಪಗೊಳ, ಪಶು ವೈದ್ಯಕೀಯ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಬೆಂಗಳೂರು ಪ್ರಯೋಗಾಲಯದ ಮುಖ್ಯಸ್ಥ ಶ್ರೀಕೃಷ್ಣ ಇಸ್ಲೂರ, ಹ್ಯೂಮೇನ್ ವರ್ಲ್ಡ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೇಶನ್ ಪ್ರತಿನಿಧಿ ರಮೇಶ್ ಭಜಂತ್ರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ(ರಾಜ್ಯ ವಲಯ) ಡಾ. ಎಚ್. ನಾಗರಾಜ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ತಜ್ಞರಿಂದ ತಾಂತ್ರಿಕ ಉಪನ್ಯಾಸಗಳು, ಚರ್ಚೆಗಳು ಹಾಗೂ ಜಾನುವಾರು ಆರೋಗ್ಯ ನಿರ್ವಹಣೆಯ ನವೀನ ವಿಧಾನಗಳ ಕುರಿತು ವಿಚಾರ ವಿನಿಮಯ ನಡೆಯಿತು. ಗದಗ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ ಸ್ವಾಗತಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಆರ್.ವೈ. ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಜೈನರ‌ ನಿರೂಪಿಸಿದರು.