ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಎಪಿಸಿಸಿಎಫ್‌ಗಳಾದ ಕುಮಾರ್‌ ಪುಷ್ಕರ್‌, ಮನೋಜ್‌ ರಾಜನ್ ಇತರರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸುವ ಉದ್ದೇಶದೊಂದಿಗೆ ಅರಣ್ಯ ಭವನದಲ್ಲಿ ಆರಂಭಿಸಲಾಗಿರುವ ರಾಜ್ಯ ಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಮತ್ತು 7 ವಿಭಾಗಗಳ ಪ್ರಾದೇಶಿಕ ನಿಯಂತ್ರಣ ಕೇಂದ್ರವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಶನಿವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಈಶ್ವರ್‌ ಖಂಡ್ರೆ, ಕಾಡಂಚಿನ ಜನ ವನ್ಯಜೀವಿಗಳ ಸಂಚಾರ ಬಗ್ಗೆ ಅಥವಾ ಅರಣ್ಯ ಅಪರಾಧಗಳ ಬಗ್ಗೆ ದೂರು, ಮಾಹಿತಿ ನೀಡುವ ಉದ್ದೇಶದೊಂದಿಗೆ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಆರಂಭಿಸಲಾಗಿದೆ. ಜನ ಇಲಾಖೆಯ ದೂರವಾಣಿ ಸಂಖ್ಯೆ 1926ಗೆ ಕರೆ ಮಾಡಿ ಮಾಹಿತಿ ನೀಡಿದರೆ ನಿಯಂತ್ರಣ ಕೇಂದ್ರದಿಂದ ಸಂಬಂಧಿತ ವಿಭಾಗಕ್ಕೆ ಮಾಹಿತಿ ರವಾನಿಸಿ ವನ್ಯಜೀವಿಗಳು ನಾಡಿನತ್ತ ಬರುವುದನ್ನು ತಡೆಯುವುದು ಹಾಗೂ ಅರಣ್ಯ ಅಪರಾಧಕ್ಕೆ ಕಡಿವಾಣ ಹಾಕಲಾಗುತ್ತದೆ. ಜನ ನೀಡುವ ದೂರುಗಳನ್ನು ಹಿರಿಯ ಅಧಿಕಾರಿಗಳು ನಿಗಾವಹಿಸಲಿದ್ದು, ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಕಮಾಂಡ್‌ ಸೆಂಟರಲ್ಲಿ ಪರಾಮರ್ಶೆ:

ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳ ವಿಡಿಯೋ ಮತ್ತು ಬಾಹ್ಯಾಕಾಶ ಚಿತ್ರಗಳನ್ನು ಕಮಾಂಡ್‌ ಸೆಂಟರ್‌ನಲ್ಲಿ ಪರಾಮರ್ಶಿಸಲಾಗುತ್ತದೆ. ಅದರಿಂದಲೂ ವನ್ಯಜೀವಿಗಳ ಚಲನವಲನ ಕುರಿತು ಮಾಹಿತಿ ಸಿಗುವುದರಿಂದ ವನ್ಯಜೀವಿಗಳ ರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸಂಭಾವ್ಯತೆ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಎಪಿಸಿಸಿಎಫ್‌ಗಳಾದ ಕುಮಾರ್‌ ಪುಷ್ಕರ್‌, ಮನೋಜ್‌ ರಾಜನ್ ಇತರರಿದ್ದರು.