ಸಾರಾಂಶ
ಕಳೆದ ಭಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿದ್ದು ಯಾವುದೇ ರೀತಿಯ ಸಂಭಾವನೆ ದೊರೆತಿಲ್ಲ ಎಂದು ಲಾಲ್ ಕುಮಾರ್ ತಿಳಿಸಿದರು.
ನಾಪೋಕ್ಲು: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಉಪನ್ಯಾಸಕರು ಹಾಗೂ ಮುಖ್ಯ ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿ ಮಾಸ್ಟರ್ ಟ್ರೈನರ್ಸ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದು, ಯಾವುದೇ ರೀತಿಯ ಸಂಭಾವನೆ ಇದುವರೆಗೂ ಸಹ ದೊರಕಿರುವುದಿಲ್ಲ ಎಂದು ವಿರಾಜಪೇಟೆ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಲಾಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಕಳೆದು ವರ್ಷಗಳು ಆಗುತ್ತಾ ಬಂದಿದೆ. ಮುಂದಿನ ಲೋಕಸಭೆ ಚುನಾವಣೆ ಸಹ ಹತ್ತಿರ ಬರುತ್ತಿದ್ದಂತೆ ಹಿಂದಿನ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ ಸುಮಾರು ಉಪನ್ಯಾಸಕರು ಹಾಗೂ ಮುಖ್ಯ ಶಿಕ್ಷಕರಿಗೆ ಇದುವರೆಗೂ ಗೌರವಧನವನ್ನು ನೀಡದಿರುವುದು ಬೇಸರವನ್ನುಂಟು ಮಾಡಿದೆ. ಇನ್ನು ಕೆಲವೇ ದಿನಗಳು ಲೋಕಸಭೆ ಚುನಾವಣೆಗೆ ಇರುವುದರಿಂದ ಮಾಸ್ಟರ್ ಟ್ರೈನರ್ಸ್ ಆಗಿ ಕರ್ತವ್ಯ ನಿರ್ವಹಿಸಿರುವ ಎಲ್ಲರಿಗೂ ಸಹ ಸಂಭಾವನೆಯನ್ನು ತಕ್ಷಣ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಅದೇ ರೀತಿ ನಮ್ಮ ವಿರಾಜಪೇಟೆ ತಾಲೂಕಿನ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸುತ್ತೇವೆ. ಆದುದರಿಂದ ಆದಷ್ಟು ಶೀಘ್ರದಲ್ಲಿ ನೀಡಬೇಕಾಗಿರುವಂತಹ ಸಂಭಾವನೆಯನ್ನು ತಾಲೂಕಿನ ದಂಡಾಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮವನ್ನು ತೆಗೆದುಕೊಂಡು ಸಂಭಾವನೆ ನೀಡಬೇಕು ಎಂದು ತಾಲೂಕಿನ ಮುಖ್ಯ ಶಿಕ್ಷಕರ ಸಂಘದ ಪರವಾಗಿ ತಿಳಿಸಿದ್ದಾರೆ.