ಕಡ್ಡಾಯವಾಗಿ ಟ್ರಾಫಿಕ್ ನಿಯಮ ಪಾಲಿಸಿ: ಶ್ರೀ ಸಿದ್ಧಲಿಂಗ ಸ್ವಾಮೀಜಿ

| Published : May 05 2024, 02:05 AM IST

ಕಡ್ಡಾಯವಾಗಿ ಟ್ರಾಫಿಕ್ ನಿಯಮ ಪಾಲಿಸಿ: ಶ್ರೀ ಸಿದ್ಧಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆ, ರಸ್ತೆಗಳಲ್ಲಿ ಸಂಚರಿಸುವಾಗ ಎಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಂಚಾರಿ ನಿಯಮಗಳನ್ನು ಹೇಗೆ ಪಾಲಿಸಬೇಕು

ಕನ್ನಡಪ್ರಭ ವಾರ್ತೆ ತುಮಕೂರುಪ್ರಸ್ತುತ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆ, ರಸ್ತೆಗಳಲ್ಲಿ ಸಂಚರಿಸುವಾಗ ಎಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಂಚಾರಿ ನಿಯಮಗಳನ್ನು ಹೇಗೆ ಪಾಲಿಸಬೇಕು ಎಂಬ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಅನನ್ಯ ಬಸವೇಶ್ ಬರೆದು ಹೊರ ತಂದಿರುವುದು ಉತ್ತಮ ಕಾರ್ಯವಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಸಿದ್ದಗಂಗಾ ಮಠದಲ್ಲಿ ರೈಡ್ ಎನ್ ರೋಡ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಟ್ರಾಫಿಕ್ ಸಮಸ್ಯೆಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಅರಿವು ಹೊಂದಿರುವ ಅನನ್ಯ ಬಸವೇಶ್ ದ್ವಿಚಕ್ರ ವಾಹನ ಸವಾರರು, ಬಸ್, ಲಾರಿ, ಕಾರು ಚಾಲಕರು, ಪಾದಚಾರಿಗಳು ರಸ್ತೆಯಲ್ಲಿ ಹೇಗೆ ಸಂಚರಿಸಬೇಕು. ಸುರಕ್ಷತಾ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಎಲ್ಲ ಅಂಶಗಳನ್ನೊಳಗೊಂಡ ಪುಸ್ತಕ ಬರೆದು ಜನಸಾಮಾನ್ಯರಿಗೆ ಮಾಹಿತಿ ಹಂಚುವ ಕೆಲಸ ಮಾಡಿದ್ದಾರೆ ಎಂದರು.

ಈ ರೈಡ್ ಆನ್ ರೋಡ್ ಪುಸ್ತಕ ಜನಸಾಮಾನ್ಯರಿಗೆ ಬಹಳ ಉಪಯುಕ್ತವಾಗಿದೆ. ಈ ಪುಸ್ತಕವನ್ನು ಪ್ರತಿನಿತ್ಯ ವಾಹನಗಳಲ್ಲಿ ಓಡಾಡುವವರು ಸೇರಿದಂತೆ ರಸ್ತೆಯಲ್ಲಿ ಸಂಚರಿಸುವವರೆಲ್ಲರೂ ಓದಿದರೆ ರಸ್ತೆ ಸುರಕ್ಷತಾ ಪಾಲನಾ ಕ್ರಮಗಳನ್ನು ಅನುಸರಿಸಲು ಸುಲಭವಾಗಲಿದೆ. ಟ್ರಾಫಿಕ್ ಸಮಸ್ಯೆ, ಅಪಘಾತಗಳ ತಡೆಗೆ ಈ ಪುಸ್ತಕದಲ್ಲಿ ಅಂಶಗಳು ಸಹಕಾರಿಯಾಗಲಿವೆ. ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದುಕೊಂಡು ಈ ರೀತಿಯ ಪುಸ್ತಕ ಬರೆಯುವ ಹವ್ಯಾಸ ರೂಢಿಸಿಕೊಂಡಿರುವ ಅನನ್ಯ ಬಸವೇಶ್ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾಳಜಿಯುಳ್ಳ ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಆಶಿಸಿದರು.

ರೈಡ್ ಎನ್ ರೋಡ್ ಪುಸ್ತಕದ ಬರಹಗಾರ ಅನನ್ಯ ಬಸವೇಶ್ ಮಾತನಾಡಿ, ನಾನು ಪ್ರತಿನಿತ್ಯ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿರುವಾಗ ರಸ್ತೆಯಲ್ಲಿ ನಡೆಯತ್ತಿದ್ದ ಅಪಘಾತಗಳು, ಟ್ರಾಫಿಕ್ ಸಮಸ್ಯೆ, ಇನ್ನಿತರೆ ಅನಾಹುತಗಳು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಸೇರಿದಂತೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಆಗ ನನಗೆ ಏಕೆ ಈ ಕುರಿತು ಒಂದು ಪುಸ್ತಕ ಬರೆಯಬಾರದು ಎಂಬ ಆಲೋಚನೆ ಬಂದಿತು ಎಂದರು.

ದಿನನಿತ್ಯ ನಾವು ಸೇರಿದಂತೆ ಜನಸಾಮಾನ್ಯರು ರಸ್ತೆಯಲ್ಲಿ ಹೇಗೆ ಓಡಾಡಬೇಕು, ಹೇಗೆ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದು ಸೇರಿದಂತೆ ರಸ್ತೆಯಲ್ಲಿ ಹೇಗೆ ಓಡಾಡಬೇಕು ಎಂಬೆಲ್ಲಾ ವಿಚಾರಗಳನ್ನು ಒಳಗೊಂಡಂತೆ ರೈಡ್ ಎನ್ ರೋಡ್ ಬರೆದಿದ್ದೇನೆ. ರಸ್ತೆಯಲ್ಲಿ ವಾಹನ ಚಾಲಕರು, ಪಾದಚಾರಿಗಳು, ಮಕ್ಕಳು, ವೃದ್ಧರು ಪ್ರತಿನಿತ್ಯ ಓಡಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಯಾವುದೇ ರೀತಿಯ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ವಾಹನ ಓಡಿಸುವುದನ್ನು ನೋಡಿದ್ದೇವೆ. ಇದರಿಂದ ಕುಟುಂಬಕ್ಕೆ ತೊಂದರೆಯಾಗಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಎಂದು ಹೇಳಿದರು.

ಈ ಪುಸ್ತಕವನ್ನು ಓದುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಅಪಘಾತಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಮದ್ಯಪಾನ ಮಾಡಿದವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಹಾಗಾಗಿ ಮದ್ಯಪಾನ ಮಾಡಿದ ವಾಹನ ಚಾಲಕರು ವಾಹನಗಳನ್ನು ಅತಿವೇಗವಾಗಿ ಓಡಿಸುವುದುಂಟು. ಆದರೆ ದೇಹ ನಮ್ಮ ಹಿಡಿತದಲ್ಲಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಪುಸ್ತಕದಲ್ಲಿ ಲಭ್ಯವಿದೆ ಎಂದರು.

ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಆದರೆ ಕೆಲವರು ಹೆಲ್ಮೆಟ್ ಹಾಕಿದರೆ ತಲೆ ಕೂದಲು ಉದುರುತ್ತವೆ ಎಂದು ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿರುತ್ತಾರೆ. ಒಂದು ವೇಳೆ ಅಪಘಾತ ಸಂಭವಿಸಿದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದನ್ನು ದ್ವಿಚಕ್ರ ವಾಹನ ಸವಾರರು ಮರೆಯಬಾರದು ಎಂದು ಮಾಹಿತಿ ನೀಡಿದರು.

ಹೆಲ್ಮೆಟ್ ಧರಿಸಿ ತಲೆಕೂದಲು ಉದುರುವುದಿಲ್ಲ ಎಂಬ ವೈಜ್ಞಾನಿಕ ಮಾಹಿತಿಯೂ ನಾನು ಬರೆದಿರುವ ಪುಸ್ತಕದಲ್ಲಿದೆ. ಮುಂದಿನ ದಿನಗಳಲ್ಲಿ ಯಾರಾದರೂ ದಾನಿಗಳು ಸಹಕಾರ ನೀಡಿದರೆ ರೈಡ್ ಎನ್ ರೋಡ್ ಆಂಗ್ಲ ಭಾಷಾ ಪುಸ್ತಕವನ್ನು ಕನ್ನಡದಲ್ಲೂ ಹೊರ ತರಬೇಕೆಂದು ಕೊಂಡಿದ್ದೇನೆ ಎಂದರು.

ತುಮಕೂರು ವಿವಿಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಚ್.ಕೆ. ಶಿವಲಿಂಗಸ್ವಾಮಿ, ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ.ಎಚ್.ವಿ. ತೇರುಮಲ್ಲಪ್ಪ, ಪ್ರೊ. ಬಸವೇಶ್, ಚಂದ್ರಶೇಖರ್ ಇದ್ದರು.