ಸಾರಾಂಶ
ಹೊಳೆಹೊನ್ನೂರು: ಇಂದಿನ ಆಧುನಿಕ ತಾಂತ್ರಿಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಹಾಸುಕೊಕ್ಕಿದೆ ಎಂದು ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.ಪಟ್ಟಣದ ಭಾಗ್ಯಶ್ರೀ ಕಂಪ್ಯೂಟರ್ಸ್ ಕಿಯೋನಿಕ್ಸ್ ಯುವ.ಕಾಂ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ 42ನೇ ವರ್ಷದ ಶ್ರೀ ಶಾರದಾ ಪೂಜೆ, ಕಂಪ್ಯೂಟರ್, ಟೈಪ್‍ರೈಟಿಂಗ್ ಶಿಕ್ಷಣದ ಪ್ರಮಾಣಪತ್ರ ವಿತರಣೆ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಂಪ್ಯೂಟರ್ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಪಡೆದುಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತಿದೆ. ಸ್ಥಳೀಯ ಪಂಚಾಯಿತಿ ಕಚೇರಿಯಲ್ಲಿ ವಿಚಾರಿಸಿ ಉಚಿತ ತರಬೇತಿ ಪಡೆದುಕೊಳ್ಳಬಹುದು. ಅದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಸಿದರು.ಕಲ್ಲಿಹಾಳ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಎನ್.ಪಂಕಜಾ ಮಾತನಾಡಿ, ಇತ್ತೀಚೆಗೆ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಓದುವ ಬಗ್ಗೆ ನಿರ್ಲಕ್ಷ ವಹಿಸದೆ ಶಿಕ್ಷಣ ಪಡೆಯುವಾಗಲೆ ಶ್ರಮವಹಿಸಿ ವ್ಯಾಸಂಗ ಮಾಡಬೇಕು. ಆಗ ಮಾತ್ರ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.ಇದೇ ವೇಳೆ 2023-24ನೇ ಸಾಲಿನ ಟೈಪ್‍ರೈಟಿಂಗ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜಯಲಕ್ಷ್ಮಿ, ಎಂ.ಎಸ್.ಸುನೀಲ್, ಎಂ.ಕೆ.ಭೂಮಿಕಾ, ಪ್ರಿಯದರ್ಶಿನಿ, ಕೆ.ಬಿ.ಸ್ನೇಹಾ ಅವರಿಗೆ ಪ್ರಶಸ್ತಿಪತ್ರ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಅಲ್ಲದೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ವಿಣಾ ವಾಣಿಜ್ಯ ವಿದ್ಯಾ ಶಾಲೆಯ ಪ್ರಾಂಶುಪಾಲರಾದ ಭಾಗ್ಯಶ್ರೀ ವಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಮುಖ್ಯಸ್ಥ ಜಿ.ವಿ.ಜಯಂತ್, ಪಟ್ಟಣ ಪಂಚಾಯಿತಿಯ ಕೆ.ಬಸವರಾಜ್, ಆರೋಗ್ಯ ನಿರೀಕ್ಷಕ ಎನ್.ಅಣ್ಣಪ್ಪಸ್ವಾಮಿ, ರಂಗಪ್ಪ, ಕರಿಯಪ್ಪ ಇದ್ದರು.