ಭೂ ದಾಖಲೆ ಗಣಕೀಕರಣ

| Published : Jan 10 2025, 12:46 AM IST

ಸಾರಾಂಶ

ರೈತರು ಜಮೀನನ್ನು ಮಾರಾಟಮಾಡಲು ಮತ್ತು ಕೊಂಡುಕೊಳ್ಳಲು ಭೂದಾಖಲೆಗಳು ಬಹುಮುಖ್ಯ, ಹಾಗಾಗಿ ದಾಖಲೆಗಳು ನಶಿಸದೇ, ಬೆಂಕಿಗೆಬಿದ್ದು ಹಾಳಾಗುವುದನ್ನು ತಡೆದು ಸುರಕ್ಷಿತವಾಗಿರಲು ದಾಖಲೆಗಳನ್ನು ಗಣಕೀಕರಣ ಮಾಡಿ ಸಂರಕ್ಷಿತವಾಗಿಡುವ ಕಾರ್ಯಕ್ರಮವಾಗಿದೆ, ಈ ಕಾರ್ಯವನ್ನು 8 ತಿಂಗಳ ಕಾಲಾವಧಿಯೊಳಗೆ ಮುಗಿಸಲಾಗುವುದು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕು ಆಡಳಿತ ಕಚೇರಿಯಲ್ಲಿ, ರೈತರ ಭೂ ದಾಖಲೆಗಳು ಹಾಳಾಗದಂತೆ ಮತ್ತು ಕಳುವಾಗದೇ, ನಶಿಸದಂತೆ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಸರ್ಕಾರವು ಭೂ ಸುರಕ್ಷಾ ಯೋಜನೆಯಡಿ, ಅಭಿಲೇಖಾಲಯದಲ್ಲಿರುವ ಕಂದಾಯ ದಾಖಲೆಗಳ ಗಣಕೀಕರಣಗೊಳಿಸುವ ಕಾರ್ಯಕ್ರಮಕ್ಕೆ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಚಾಲನೆ ನೀಡಿದರು. ನಗರದ ಹೊರವಲಯದಲ್ಲಿರುವ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ಅಭಿಲೇಖಾಲಯದಲ್ಲಿ (ರೇಕಾರ್ಡ ರೂಂ) ಕೈ ಗೊಂಡಿರುವ ಪೂರ್ವಸಿದ್ದತಾ ಕೆಲಸಗಳನ್ನು ವೀಕ್ಷಿಸಿ, ಗಣಕೀಕರಣಕ್ಕೆ ಚಾಲನೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಪವತಿ ಖಾತೆ ಆಂದೋಲನ ಹಾಗೂ ಪಿಂಚಣಿ ಆದಾಲತ್ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು.

ದಾಖಲೆಗಳ ಸುರಕ್ಷತೆ ಉದ್ದೇಶ

ರೈತರು ಜಮೀನನ್ನು ಮಾರಾಟಮಾಡಲು ಮತ್ತು ಕೊಂಡುಕೊಳ್ಳಲು ಭೂದಾಖಲೆಗಳು ಬಹುಮುಖ್ಯ, ಹಾಗಾಗಿ ದಾಖಲೆಗಳು ನಶಿಸದೇ, ಬೆಂಕಿಗೆಬಿದ್ದು ಹಾಳಾಗುವುದನ್ನು ತಡೆದು ಸುರಕ್ಷಿತವಾಗಿರಲು ದಾಖಲೆಗಳನ್ನು ಗಣಕೀಕರಣ ಮಾಡಿ ಸಂರಕ್ಷಿತವಾಗಿಡುವ ಕಾರ್ಯಕ್ರಮವಾಗಿದೆ, ಈ ಕಾರ್ಯವನ್ನು 8 ತಿಂಗಳ ಕಾಲಾವಧಿಯೊಳಗೆ ಮುಗಿಸಬೇಕಾಗಿದೆ ಎಂದರು. ಕಳೆದ 200ವರ್ಷಗಳ ಕಾಲದ ರೈತರ ದಾಖಲೆಗಳು, ಹಾಳಾಗಬಾರದೆಂದು ಸರ್ಕಾರ ಕಂದಾಯ ಇಲಾಖೆಯ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ, ಮತ್ತು ಒಮ್ಮೆ ಗಣಕೀಕೃತ ಗೊಂಡರೆ ಯಾವುದೇ ರೈತರು ದಾಖಲೆಗಳಿಗಾಗಿ ಪದೇ ಪದೇ ಕಚೇರಿಗಳಿಗೆ ಅಲೆದಾಟವು ತಪ್ಪುತ್ತದೆ ಎಂದು ಹೇಳಿದರು. 8 ತಿಂಗಳೊಳಗೆ ಗಣಕೀರಣ

ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ ಭೂಸುರಕ್ಷಾ ಯೋಜನೆ ಇಡೀ ರಾಜ್ಯಾಧ್ಯಂತ ಹಮ್ಮಿಕೊಳ್ಳಲಾಗಿದೆ, ನಮ್ಮ ಕಚೇರಿಯಲ್ಲಿ ಒಟ್ಟು 1,07,488ಕಡತಗಳಿದ್ದು, 43,26,802ಪುಟಗಳು ಗಣಕೀಕರಣವನ್ನು 8 ತಿಂಗಳ ಕಾಲಾವಧಿಯೊಳಗೆ ಸಂಪೂರ್ಣ ಮುಗಿಸಿ ರೈತರಿಗೆ ದಾಖಲೆಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು. ಶಾಸಕರ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ತಾಲ್ಲೂಕಿನ ನಿವೇಶನ ರಹಿತರಿಗೆ 10,000 ನಿವೇಶನಕ್ಕಾಗಿ ಎರಡುನೂರು ಎಕರೆ ಜಮೀನು ಕಂದಾಯ ಇಲಾಖೆಯಿಂದ ಗುರತಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿಶ್ರೀ, ಗ್ರೇಡ್ 2 ತಹಸೀಲ್ದಾರ್ ಆಶಾ, ಶಿರೇಸ್ತ್ದಾರ್ ಕಬೀರ್, ಪ್ರಥಮ ದರ್ಜೆ ಸಹಾಯಕ ಪ್ರಶಾಂತ್ ಮತ್ತ ಕೆೆಚ್‌ಪಿ ಫೌಂಡೇಷನ್ ಸಹಾಯಕ ಕಾರ್ಯದರ್ಶಿ ಶ್ರೀನಿವಾಸಗೌಡ ಮತ್ತಿತರರು ಭಾಗವಹಿಸಿದ್ದರು.