ಗಣಕಯಂತ್ರ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು: ಮಾರುತಿ

| Published : Jun 07 2024, 12:30 AM IST

ಗಣಕಯಂತ್ರ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು: ಮಾರುತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕ ಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಹೇಳಿದರು. ಗಣಕ ವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಪ್ರಥಮ ಪಿಯುಸಿ ಗಣಕ ವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಬರುವ ಮೊದಲ ಹಂತ ಅಂದರೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು. ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ತಿಳಿಸಿದರು.

ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್‌ ಇಲ್ಲಿ ಜೂನ್‌ 5 ರಂದು ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರಿಗೆ “ಪೈಥಾನ್‌ ಪ್ರೋಗ್ರಾಂಮಿಂಗ್‌” ಸವಿವರವಾಗಿ ಪ್ರಾಯೋಗಿಕ ತರಗತಿ ಸಮೇತ ಕಾರ್ಯಾಗಾರವನ್ನು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ರಂಜನ್‌, ಗುರುಪ್ರಸಾದ್‌ ಹಾಗೂ ಯಶಸ್ವಿನಿ ನಡೆಸಿಕೊಟ್ಟು ಸೂಕ್ತ ಮಾರ್ಗದರ್ಶನ ನೀಡಿದರು.

ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಕಮಲಾಕ್ಷಿ ಪ್ರಕಾಶ್‌, ಎಲ್ಲಾ ಉಪನ್ಯಾಸಕರು ಒಂದೇ ಸೂರಿನಡಿಯಲ್ಲಿ ಪಠ್ಯಕ್ರಮ ಬದಲಾವಣೆಗೆ ಸೂಕ್ತವಾಗಿ ಹೊಂದಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಜ್ಞಾನ ಒದಗಿಸುವ ಪ್ರಯತ್ನ ಮಾಡಬೇಕು ಎಂದು ನುಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ‘ಉಡುಪಿ ಜಿಲ್ಲೆಯ ಎಲ್ಲ ಗಣಕ ವಿಜ್ಞಾನ ಉಪನ್ಯಾಸಕರು ನಮ್ಮ ದೇಶ ಗಣಕೀಕೃತ ದೇಶವಾಗಲು ರಾಯಭಾರಿಗಳು. ನಮ್ಮ ವಿದ್ಯಾರ್ಥಿಗಳಿಗೆ ಗಣಕವಿಜ್ಞಾನ ಸರಿಯಾಗಿ ತಿಳಿಸಿಕೊಟ್ಟರೆ ನಮ್ಮ ದೇಶ ಗಣಕೀಕೃತದಲ್ಲಿ ಮತ್ತೊಂದು ಹೆಜ್ಜೆ ಇರಿಸಿದಂತೆ’ ಎಂದು ಪ್ರೋತ್ಸಾಹದ ನುಡಿಗಳನ್ನು ಆಡಿದರು.

ಈ ಸಂದರ್ಭ ಸಂಘದ ನೂತನ ಅಧ್ಯಕ್ಷರನ್ನಾಗಿ ಕ್ರಿಯೇಟಿವ್‌ ಪ.ಪೂ ಕಾಲೇಜು, ಕಾರ್ಕಳದ ಗಣಕವಿಜ್ಞಾನ ಉಪನ್ಯಾಸಕರಾದ ಜ್ಞಾನೇಶ್‌ ಕೋಟ್ಯಾನ್‌ ಅವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಶಕುಂತಳ ರಾಜೇಶ್‌ ವಿದ್ಯೋದಯ ಪ.ಪೂ ಕಾಲೇಜು ಉಡುಪಿ, ಖಜಾಂಚಿಯಾಗಿ ಬಿನು ಜಯಚಂದ್ರ ಪಾಲನ್‌ ಸೆಂಟ್‌ ಮೇರಿಸ್‌ ಕಾಂಪೋಸಿಟ್‌ ಪ.ಪೂ ಕಾಲೇಜು ಕುಂದಾಪುರ ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷರಾದ ರಾಮ ನಾಯ್ಕ ಸ್ವಾಗತಿಸಿದರು. ದಿವ್ಯ ವಂದಿಸಿದರು. ಗಾಯತ್ರಿ ನಿರೂಪಿಸಿದರು.