ಕುಕನೂರು: ಮುಂದಿನ ಪೀಳಿಗೆಗೆ ಹಿಂದುತ್ವದ ಪರಿಕಲ್ಪನೆ ನೀಡುವ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ಮೂಲಕ ಹಿಂದುತ್ವದ ಪ್ರತಿಪಾದನೆ ಮಾಡುವ ಕಾರ್ಯ ಹೆಚ್ಚು ಆಗಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ ಶ್ರೀ ಮಹೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. ೮ರಂದು ಇಟಗಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ. ಹಿಂದುತ್ವದ ಉಳಿವು ಆಗಬೇಕಿದೆ. ಹಿಂದುತ್ವ ಮರೆಮಾಚುವ ಕೆಲಸ ಆಗಬಾರದು. ಭರತ ಭೂಮಿಯಲ್ಲಿ ಜನಿಸಿರುವ ಪ್ರತಿಯೊಬ್ಬರೂ ಹಿಂದುತ್ವದ ಕಲ್ಪನೆ ಉಳಿಸಿಕೊಳ್ಳಬೇಕು ಎಂದರು.

ದೇವಸ್ಥಾನ ಅರ್ಚಕ ಶ್ರೀಕಾಂತ ಪೂಜಾರ ಮಾತನಾಡಿ, ಇಟಗಿ ಗ್ರಾಮದಲ್ಲಿ ಮಾ. ೮ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀ ಮಹೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ವಾದ್ಯಗಳು ಭಾಗವಹಿಸಲಿದ್ದು, ಕರಡಿ ಮಜಲು, ಕೋಲಾಟ, ಭಜನೆಯ ಮೂಲಕ ಶೋಭಾಯಾತ್ರೆ ನಡೆಯಲಿದೆ ಎಂದರು.

ಮುಖಂಡ ಮಹೇಶ ದೊಡ್ಮನಿ ಮಾತನಾಡಿ, ಮಾ. 8ರಂದು ಸಂಜೆ ೫ ಗಂಟೆಗೆ ಶ್ರೀ ಮಹಾದೇವ ದಂಡನಾಯಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗ್ರಾಮದ ಸಮಾಜ ಸೇವಕಿ ಹುಲಿಗೆಮ್ಮ ಹುರಕಣ್ಣವರ ಅಧ್ಯಕ್ಷತೆ ವಹಿಸುವರು. ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಅರುಣಕುಮಾರ ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಸಾಹಿತಿ ಬಿ.ಎಂ. ಹಳ್ಳಿ, ಪ್ರಭು ಹಳ್ಳಿ, ರಾಮಣ್ಣ ಹಿರೇಮನಿ, ಪ್ರಮುಖರಾದ ಅಂದಪ್ಪ ಹುರಳ್ಳಿ, ಬಿ.ಎಂ. ಹಳ್ಳಿ, ಸೋಮಣ್ಣ ಬಡಿಗೇರ, ವಿರೂಪಾಕ್ಷಪ್ಪ ಹುರಳ್ಳಿ, ಶಾಂತಯ್ಯ ಕಂತಿ, ಮಹಾಂತೇಶ ಕೌದಿ, ಶಿವಕುಮಾರ ಗುಳಗಣ್ಣವರ, ಪ್ರವೀಣ ಗುಳಗಣ್ಣವರ, ಮಂಜುನಾಥ ಕೋವಿ ಇತತರಿದ್ದರು.


ಆರ್‌ಎಸ್‌ಎಸ್ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಟಗಿ ಗ್ರಾಮದಲ್ಲಿ ಭರತ ಭೂಮಿಯಲ್ಲಿ ರಾಷ್ಟ್ರೀಯತೆ ಜತೆಗೆ ಹಿಂದುತ್ವದ ಪರಿಪೂರ್ಣತೆಯ ವ್ಯಕ್ತಿ ನಿರ್ಮಾಣ ಕಾರ್ಯ ಸಹ ಆಗುತ್ತಿದೆ. ಇದರ ಜತೆಗೆ ರಾಷ್ಟ್ರಕ್ಕೆ ಶಕ್ತಿ ತುಂಬುವ ಕಾರ್ಯ ಜರುಗುತ್ತಿದೆ. ಆ ನಿಟ್ಟಿನಲ್ಲಿ ವಿಶ್ವದಲ್ಲಿಯೇ ಕಲಾಕೆತ್ತನೆಯ ದೇವಾಲಯ ಚಕ್ರವರ್ತಿ ಇಟಗಿ ಮಹೇಶ್ವರ ದೇವಸ್ಥಾನ ಆವರಣದಲ್ಲಿ ಹಿಂದುತ್ವದ ಸಾರ ಅನಾವರಣಗೊಳ್ಳಲಿದೆ ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದ್ದಾರೆ.