ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ದಿವಂಗತ ಡಿ.ಎಚ್.ನಾಗೇಶ್‌ರವರ ಪ್ರಥಮ ವರ್ಷದ ಪುಣ್ಯ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಡ್ಯ ಒಡನಾಡಿ ಲಯನ್ಸ್ ಸಂಸ್ಥೆ, ಶ್ರೀಹರ್ಷ ಸಮಾಜ ಸೇವಾ ಫೌಂಡೇಶನ್ ಕಾರಸವಾಡಿ, ಕಾಳಿಕಾಂಬ ವಿದ್ಯಾಸಂಸ್ಥೆ ಆಶ್ರಯದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ೫೦೦ಕ್ಕೂ ಹೆಚ್ಚು ನಾಗರಿಕರು ಆರೋಗ್ಯ ತಪಾಸಣೆ ಪಡೆದುಕೊಂಡರು, ೩೦ ಜನ ಯುವ ಮಿತ್ರರು ರಕ್ತದಾನ ಮಾಡಿ ಮೆಚ್ಚುಗೆ ಪಡೆದರು.ಮಾಜಿ ಸಚಿವ ಹಾಗೂ ಕಾಳಿಕಾಂಬ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಸಿ.ತಮ್ಮಣ್ಣ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ನೀಡುವಂತಹ ಯೋಜನೆಗಳನ್ನು ರೂಪಿಸುವ ನಮ್ಮಂತಹ ಜನಪ್ರತಿನಿಧಿಗಳಿಗೆ ನಾಗೇಶ್ ಮಾದರಿಯಾಗಿದ್ದರು. ಅವರ ಜೀವಿತಾವಧಿಯಲ್ಲಿ ನೂರಾರು ಉತ್ತಮ ಶಿಷ್ಯಂದಿರನ್ನು ಹುಟ್ಟು ಹಾಕಿ ಅವರ ಮೂಲಕ ಇಂದು ಸಮುದಾಯದ ಆರೋಗ್ಯವನ್ನು ಕಾಪಾಡುವಂತ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.
ಶಿಬಿರ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಜನ ಸಮುದಾಯದ ಅಭಿವೃದ್ಧಿಗಾಗಿ ಏನಾದರೂ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ನಮಗೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಶ್ರೇಯಸ್ಸು ಸಿಗಲು ಸಾಧ್ಯ. ಆ ನಿಟ್ಟಿನಲ್ಲಿ ದಿವಂಗತ ನಾಗೇಶ್ ಬದುಕಿದ್ದ ಕಾಲದಲ್ಲಿ ಮಾಡಿದಂತಹ ಸಮಾಜ ಕಟ್ಟುವ ಕೆಲಸಗಳು ಇಂದಿನ ಯುವ ಜನರಿಗೆ ಮಾದರಿಯಾಗಿದೆ ಎಂದರು.ಸಮಾರಂಭದ ವೇದಿಕೆಯಲ್ಲಿ ಒಡನಾಡಿ ಲಯನ್ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹದೇವ, ಖಜಾಂಚಿ ಕುಮಾರ್, ನಿರ್ದೇಶಕರಾದ ನಿರಂಜನ್ ಬಾಣಸವಾಡಿ, ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಜಯಕುಮಾರ್, ಪ್ರತಿಮಾ, ಕಾವ್ಯ, ಸಪ್ತಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪರಶುರಾಮ್, ಉಪನ್ಯಾಸಕ ಡಾ.ಭೀಮರಾಜ್, ನಿವೃತ್ತ ಪ್ರಾಂಶುಪಾಲ ಕುಳ್ಳೇಗೌಡ, ಕಾರ್ಯಕ್ರಮ ಆಯೋಜಕರಾದ ಪ್ರದೀಪ್, ಶಿವಕುಮಾರ್ ಮತ್ತು ಶ್ರೀಕಂಠೇಗೌಡ ಉಪಸ್ಥಿತರಿದ್ದರು.