ಕೋಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿರುಜೀವ ಸಮಾರೋಪ

| Published : Sep 04 2024, 01:55 AM IST

ಸಾರಾಂಶ

ಕೋಡಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡ ಮಾಡಿದ ಗಿಡಗಳನ್ನು ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಡುವ ಮೂರು ತಿಂಗಳ ಹಸಿರುಜೀವ ಅಭಿಯಾನ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಕರಾವಳಿ ಭಾಗದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಪರಿಸರದ ಬಗ್ಗೆ ಹೊಸ ಅಧ್ಯಾಯ ಸೃಷ್ಟಿಸಿದೆ. ಇದು ಇತರ ಸಂಘಟನೆಗಳಿಗೂ ಮಾದರಿ ಕಾರ್ಯಕ್ರಮವಾಗಿದೆ. ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಸಿರು ಜೀವ ಯೋಜನೆ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.ಅವರು ಕೋಡಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡ ಮಾಡಿದ ಗಿಡಗಳನ್ನು ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಡುವ ಮೂರು ತಿಂಗಳ ಹಸಿರುಜೀವ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಗೀತಾನಂದ ಫೌಂಡೇಶನ್ ಸಮಾಜದ ದುರ್ಬಲರಿಗೆ ಸಹಾಯ ಚಾಚುತ್ತಿದ್ದು, ಪರಿಸರದ ಬಗ್ಗೆ ಅಪಾರ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅದಕ್ಕಾಗಿ ಗಿಡಗಳನ್ನು ಕೊಡಮಾಡಿ ಪರಿಸರದ ವಿಷಯದಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದರು.

ಇದೇ ವೇಳೆ ಕೋಡಿ ಗ್ರಾ.ಪಂ. ಮತ್ತು ವಿವಿಧ ಸಂಘಟನೆಗಳಿಂದ ಆನಂದ್ ಸಿ. ಕುಂದರ್ ಅವರನ್ನು ಗೌರವಿಸಲಾಯಿತು.ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಡಿ ಗ್ರಾ.ಪಂ. ಪೂರ್ವಾಧ್ಯಕ್ಷ ಪ್ರಭಾಕರ್ ಮೆಂಡನ್, ಸದಸ್ಯ ಕೃಷ್ಣ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಕೋಟದ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಖಾರ್ವಿ ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಯಮುನಾ ಎಲ್. ಕುಂದರ್ ಪ್ರಾಸ್ತಾವನೆ ಸಲ್ಲಿಸಿ ನಿರ್ವಹಿಸಿದರು. ಸಭೆಯ ನಂತರ ಕೋಡಿ ಗ್ರಾಪಂನ ವಿವಿಧ ಮನೆಗಳಿಗೆ ತೆರಳಿ ಗಿಡಗಳನ್ನು ನೆಡಲಾಯಿತು.