ನಗರದ ಜಯನಗರ ಬಡಾವಣೆಯಲ್ಲಿ ಸುಮಾರು 5 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್‌ ರಸ್ತೆಯನ್ನು ನಗರಸಭಾ ಅಧ್ಯಕ್ಷೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಜಯನಗರ ಬಡಾವಣೆಯಲ್ಲಿ ಸುಮಾರು 5 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಅವರ ಉಪಸ್ಥಿತಿಯಲ್ಲಿ ಶಾಲಾ ವಿದ್ಯಾರ್ಥಿಗಳು ಉದ್ಘಾಟಿಸಿದರು.ನಂತರ ಮಾತನಾಡಿದ ಅಧ್ಯಕ್ಷರು ಜಯನಗರ ಬಡಾವಣೆಯ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರಿದ್ದು, ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ 5 ಲಕ್ಷ ರು..ಗಳಲ್ಲಿ 100 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಈ ರಸ್ತೆಯ ಉಳಿದ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಮುಂದಿನ ಎರಡು ತಿಂಗಳುಗಳಲ್ಲಿ ನಗರದ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಸ್ಥಳೀಯ ನಿವಾಸಿಗಳು ಮಾತನಾಡಿ ವಾರ್ಡ್ನ ನಗರಸಭಾ ಸದಸ್ಯೆ ಉಷಾ ಕಾವೇರಪ್ಪ ಅವರು ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಉಳಿದಿರುವ ಕಾಮಗಾರಿಗಳನ್ನು ಕೂಡ ಪೂರ್ಣಗೊಳಿಸಿಕೊಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.ನಗರಸಭಾ ಸದಸ್ಯರಾದ ಉಷಾ ಕಾವೇರಪ್ಪ ಮಾತನಾಡಿ ವಾರ್ಡ್ನಲ್ಲಿ ಮೂಲಭೂತ ಸೌಲಭ್ಯಗಳಿಗೆ ಕೊರತೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಶಾಲಾ ಮಕ್ಕಳಿಂದ ನೂತನ ರಸ್ತೆಯನ್ನು ವಿನೂತನವಾಗಿ ಉದ್ಘಾಟಿಸಬೇಕೆನ್ನುವ ಉದ್ದೇಶದಿಂದ ವಿದ್ಯಾರ್ಥಿಗಳ ಮೂಲಕ ರಸ್ತೆ ಉದ್ಘಾಟನೆಯಾಗಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಎಂ.ಕೆ.ಕಾವೇರಪ್ಪ, ಪ್ರಮುಖರಾದ ಮನು ಮಂಜುನಾಥ್, ನಗರಸಭೆಯ ಪ್ರತಿನಿಧಿಗಳು ಹಾಗೂ ಜಯನಗರ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.